ಮಂಗಳೂರು: ನಿಶ್ಚಿತಾರ್ಥವಾಗಬೇಕಿದ್ದ ಯುವಕ ನೇಣಿಗೆ ಶರಣಾದ ಘಟನೆ ಪುತ್ತೂರು ತಾಲೂಕಿನ ಸುಳ್ಯಪದವು ಎಂಬಲ್ಲಿ ನಡೆದಿದೆ. ಅಚ್ಚರಿಯೆಂದರೆ ಯುವಕ ಆತ್ಮಹತ್ಯೆ ಮಾಡಿಕೊಂಡ ದಿನವೇ ಆತನ ಮನೆಗೆ ಕುಂದಾಪುರದಿಂದ ವಧುವೊಬ್ಬಳು ದಿಬ್ಬಣ ಸಹಿತ ಬಂದಿದ್ದಾಳೆ. ಈಕೆಯೊಂದಿಗೆ ಇದ್ದ ಪ್ರೀತಿ-ಪ್ರೇಮ ವಿಚಾರವೇ ಯುವಕನ ಆತ್ಮಹತ್ಯೆಗೆ ಕಾರಣವೆಂದು ಶಂಕೆ ವ್ಯಕ್ತವಾಗಿದೆ.
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸುಳ್ಯಪದವಿನ ಶಬರಿನಗರದ ರವಿರಾಜ್ (31) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ 10 ವರ್ಷಗಳಿಂದ ರವಿರಾಜ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೀಗ ಮನೆಯವರು ರವಿರಾಜ್ ಗೆ ವಿಟ್ಲದ ಯುವತಿಯೊಂದಿಗೆ ಮದುವೆ ಮಾತುಕತೆ ನಡೆಸಿದ್ದರು. ನ.25 ರಂದು ಇವರಿಬ್ಬರ ವಿವಾಹ ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರವಿರಾಜ್ ನ.19 ರಂದು ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಮನೆಗೆ ಬಂದಿದ್ದ ರವಿರಾಜ್ ಹೊರಗೆ ಹೋಗಿ ಬೆಳಗ್ಗೆ ಬರುವುದಾಗಿ ತಿಳಿಸಿ ಹೋಗಿದ್ದರು.
ಈ ನಡುವೆ ರವಿವಾರ ಕುಂದಾಪುರದ ಯುವತಿಯೋರ್ವಳ ಕುಟುಂಬಸ್ಥರು ಆಕೆಯ ವಿವಾಹ ದಿಬ್ಬಣದೊಂದಿಗೆ ರವಿರಾಜ್ ಮನೆಗೆ ಬಂದಿದ್ದಾರೆ. ಈ ಸಂದರ್ಭ ಮನೆಯಲ್ಲಿಲ್ಲದ ರವಿರಾಜ್ಗೆ ಫೋನ್ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರೆಂಚಡ್ಕ ಎಂಬಲ್ಲಿ ನೂತನವಾಗಿ ನಿರ್ಮಿಸುತ್ತಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ರವಿರಾಜ್ ಶವ ಪತ್ತೆಯಾಗಿದೆ.
ರವಿರಾಜ್ ಗೆ ಕುಂದಾಪುರ ಯುವತಿ ಜತೆಗೆ ಪ್ರೀತಿಯ ಸಂಬಂಧವಿತ್ತು. ಆದ್ದರಿಂದ ಅವರು ಬೇರೊಬ್ಬಳೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆಂದು ತಿಳಿದ ಆಕೆಯ ಕುಟುಂಬ ದಿಬ್ಬಣದ ಜೊತೆಗೇ ಬಂದಿತ್ತು. ಈ ಬಗ್ಗೆ ತಿಳಿದುಕೊಂಡ ರವಿರಾಜ್ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/11/2021 03:43 pm