ಮಂಗಳೂರು : ಮಂಗಳೂರು ನಗರದ ಕಂಕನಾಡಿ ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪ್ರಶಾಂತ್, ನಗರದ ಮಣ್ಣಗುಡ್ಡ ನಿವಾಸಿ ಎಂದು ಗುರುತಿಸಲಾಗಿದೆ.
ನಿನ್ನೆ ಬೆಳಿಗ್ಗೆ 10.30ಕ್ಕೆ ಪತ್ನಿ ಬಳಿ ತನಗೆ ಹುಷಾರಿಲ್ಲ. ಆಸ್ಪತ್ರೆಗೆ ಹೋಗಿಬರುತ್ತೇನೆಂದು ಪ್ರಶಾಂತ್ ತನ್ನ ಫೋರ್ಡ್ ಕಾರಿನಲ್ಲಿ ತೆರಳಿದ್ದರು. ಬೆಳಗ್ಗೆ ತೆರಳಿದ ವ್ಯಕ್ತಿ ಸಂಜೆಯವರೆಗೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಮೊಬೈಲ್ ಮೂಲಕ ಸಂಪರ್ಕ ಮಾಡಲು ಯತ್ನಿಸಿದರು. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೊದಲು ಮೊಬೈಲ್ ಲೊಕೇಷನ್ ಟ್ರೇಸ್ ಮಾಡಿದಾಗ ನಗರದ ಕಂಕನಾಡಿ ಬಳಿ ಲೊಕೇಷನ್ ಪತ್ತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆ ಸ್ಥಳಕ್ಕೆ ಭೇಟಿ ನೀಡಿದಾಗ ತನ್ನದೇ ಕಾರ್ ನೊಳಗಡೆ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವೆನ್ ಲಾಕ್ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
Kshetra Samachara
12/11/2021 05:15 pm