ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಒಳ ಪೇಟೆಯ ಹರಿಭಟ್ ರಸ್ತೆ ಯಲ್ಲಿ ಕಾರ್ಯಾಚರಿಸುತ್ತಿರುವ ದುರ್ಗಾ ಭಗವತಿ ಎಂಟರ್ಪ್ರೈಸಸ್ ಎಂಬ ಹೆಸರಿನ ಮೊಬೈಲ್ ಸೇಲ್ಸ್ ಅಂಗಡಿ ಒಳಗೆ ನುಗ್ಗಿದ ಕಳ್ಳರು ಮೊಬೈಲ್ ಸಹಿತ ನಗದು ಕಳ್ಳತನ ಮಾಡಿದ್ದಾರೆ.
ಮುಲ್ಕಿ ಸಮೀಪದ ಚಿತ್ರಾಪು ಮೂಲದ ಸುನಿಲ್ ಎಂಬವರ ಮಾಲೀಕತ್ವದ ಅಂಗಡಿಯ ಹೊರಭಾಗದ ಮೇಲಿನ ಬದಿಯಿಂದ ಶೀಟನ್ನು ಪಕ್ಕಕ್ಕೆ ಸರಿಸಿ ಒಳಗಡೆ ನುಗ್ಗಿದ ಕಳ್ಳರು ಸಿಸಿ ಕ್ಯಾಮೆರಾ ಆಫ್ ಮಾಡಿದ್ದಾರೆ. ಬಳಿಕ ಮೂರು ನೂತನ ಮೊಬೈಲ್, ರಿಪೇರಿಗೆ ಬಂದಿರುವ 2 ಮೊಬೈಲ್, ಒಂದು ಡೆಮೋ ಸೆಟ್, ಹಾಗೂ ಇನ್ನಿತರ ಇಲೆಕ್ಟ್ರಾನಿಕ್ ಸಾಮಾನುಗಳು,ಸಿಸಿ ಕ್ಯಾಮೆರಾ ಹಾಗೂ ಡ್ರಾವರ್ ನಲ್ಲಿದ್ದ ಸುಮಾರು 2000 ರೂಪಾಯಿ ಹಣ ಕಳ್ಳತನ ಮಾಡಿದ್ದಾರೆ.
ಕಳ್ಳತನ ಮಾಡಿದ ವಸ್ತುಗಳ ಮೌಲ್ಯ ಸುಮಾರು 60,000ರೂ ಎಂದು ಅಂದಾಜಿಸಲಾಗಿದೆ.ಕಳ್ಳರು ಕಳ್ಳತನ ಮಾಡಿದ ಮೊಬೈಲ್ ನ ಹೊರಭಾಗದ ರಟ್ಟಿನ ಬಾಕ್ಸ್ ಹಾಗೂ ಅಂಗಡಿಯ ಬಿಎಸ್ಎನ್ಎಲ್ ವೈಫೈ ಮೆಷಿನ್ ಮೊಬೈಲ್ ಅಂಗಡಿಯ ಹಿಂದಿನ ಭಾಗದ ಕೊಳುವೈಲು ರಸ್ತೆಯ ಬದಿಯ ಶಾಲೆಯ ಅಂಗಣದಲ್ಲಿ ಪತ್ತೆಯಾಗಿದೆ.
ಯಾರೋ ಗೊತ್ತಿದ್ದವರೇ ಈ ಕೃತ್ಯ ಮಾಡಿರಬಹುದೆಂದು ಶಂಕಿಸಲಾಗಿದೆ. ಸದಾ ಜನಸಂದಣಿ ಪ್ರದೇಶವಾದ ಹಳೆಯಂಗಡಿಯ ಹರಿಭಟ್ ಪ್ರಧಾನ ರಸ್ತೆಯ ಅಂಗಡಿಯಲ್ಲಿ ಈ ಕೃತ್ಯ ನಡೆದಿರುವುದು ಸ್ಥಳೀಯರನ್ನು ಭಯಭೀತರನ್ನಾಗಿಸಿದೆ. ಕಳೆದ ಕೆಲ ದಿನಗಳ ಹಿಂದೆ ಮುಲ್ಕಿ, ಕಾರ್ನಾಡು ಪರಿಸರದಲ್ಲಿ ಇದೇ ರೀತಿ ಕಳ್ಳತನ ನಡೆದಿದ್ದು ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
03/11/2021 08:50 pm