ಕಾರ್ಕಳ: ಕಾರ್ಕಳದಲ್ಲಿ ವ್ಯಕ್ತಿಯೊಬ್ಬರು ಪುನೀತ್ ರಾಜ್ ಕುಮಾರ್ ನಿಧನರಾದ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡಿದ ನಂತರ ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ. 56ರ ಹರೆಯದ ದಿನೇಶ್ ಕಾಣೆಯಾಗಿರುವ ವ್ಯಕ್ತಿ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ದಿನೇಶ್ ನಾಪತ್ತೆಯಾಗಿ ನಾಲ್ಕು ದಿನಗಳಾಗಿವೆ. ಪತಿ ಕಾಣೆಯಾದ ಬಗ್ಗೆ ಮಂಗಳವಾರ ಪತ್ನಿ ಸುಮಾ ಅವರು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನೇಶ್ ಈ ಹಿಂದೆ ಕಾರ್ಕಳದ ರಾಧಿಕಾ ಥಿಯೇಟರ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು. ಸಿನಿಮಾ ನಟರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.
ಲಾಕ್ ಡೌನ್ ಆರಂಭವಾದ ನಂತರ ಕಾರ್ಕಳದ ದಾನಶಾಲಾ ವರ್ಧಮಾನ ಲಾಡ್ಜ್ ಗೆ ಕೆಲಸಕ್ಕೆ ಸೇರಿದ್ದರು. ಪುನೀತ್ ಅನಾರೋಗ್ಯ ಮತ್ತು ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ, ತನ್ನ ವಸ್ತು ಹಾಗೂ ಮೊಬೈಲ್ ಲಾಡ್ಜಿನಲ್ಲಿಯೇ ಬಿಟ್ಟು, ತೆರಳಿದ್ದಾರೆ.
ನಾಪತ್ತೆಯಾಗಿರುವ ದಿನೇಶ್, ಪುನೀತ್ ಅವರ ಅಂತಿಮ ಯಾತ್ರೆ ನೋಡಲು ಬೆಂಗಳೂರಿಗೆ ತೆರಳಿರುವ ಸಾಧ್ಯತೆಗಳಿವೆ ಅಥವಾ ಹುಟ್ಟೂರು ಕಡೂರಿಗೂ ಹೋಗಿರಬಹುದು ಎಂದು ಊಹಿಸಲಾಗಿದೆ. ಆದರೆ, 4 ದಿನಗಳಿಂದ ಈ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹಿಂದೆ 2-3 ಬಾರಿ ಮನೆಯಿಂದ ತೆರಳಿ ನಂತರ ವಾಪಸಾಗಿದ್ದರು ಎನ್ನಲಾಗಿದೆ.
Kshetra Samachara
03/11/2021 12:52 pm