ಮಂಗಳೂರು: ಇಂಟರ್ನ್‌ಶಿಪ್ ಗೆಂದು ಬಂದಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಆರೋಪಿಯಾಗಿರುವ ನ್ಯಾಯವಾದಿ ರಾಜೇಶ್ ಭಟ್ ಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿರುವ ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಬೋಂದೆಲ್ ನಿವಾಸಿ ಅನಂತ ಭಟ್ (48) ಬಂಧಿತ ಆರೋಪಿ. ಲೈಂಗಿಕ ಕಿರುಕುಳ ನೀಡಿರುವ ಆರೋಪಿ ರಾಜೇಶ್ ಭಟ್ ವಿರುದ್ಧ ಕಾನೂನು ವಿದ್ಯಾರ್ಥಿನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದ. ಇದೀಗ ಆರೋಪಿ ತಲೆಮರೆಸಿಕೊಳ್ಳಲು ಅನಂತ ಭಟ್ ಎಂಬಾತ ಸಹಕರಿಸಿದ್ದಾನೆಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅನಂತ ಭಟ್ ಆರೋಪಿ ರಾಜೇಶ್ ಭಟ್ ಜೊತೆ ಸಂಪರ್ಕದಲ್ಲಿದ್ದು, ಪ್ರಕರಣ ವರದಿಯಾದ ತಕ್ಷಣ ರಾಜೇಶ್ ಭಟ್ನನ್ನು ವಾಹನದಲ್ಲಿ ದೂರದ ಸ್ಥಳಕ್ಕೆ ಬಿಟ್ಟು ತಲೆಮರೆಸಿಕೊಳ್ಳಲು ಸಹಕರಿಸಿದ್ದಾನೆಂದು ತಿಳಿದು ಬಂದಿದೆ. ರಾಜೇಶ್ ಭಟ್ ಅವರ ಕಾರು ಮತ್ತು ಮೊಬೈಲ್ ಪೋನ್ ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರಿಗೆ ಸಿಗದಂತೆ ಸಹಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅನಂತ ಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ರಾಜೇಶ್ ಭಟ್ ಕಾರು ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Kshetra Samachara
28/10/2021 04:55 pm