ಮಂಗಳೂರು: ಇಂಟರ್ನ್ ಶಿಪ್ ಗೆಂದು ಕಚೇರಿಗೆ ಬಂದಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪ ಎದುರಿಸುತ್ತಿರುವ ಮಂಗಳೂರಿನ ಲೋಕಾಯುಕ್ತ ಮತ್ತು ಎಸಿಬಿ ವಿಶೇಷ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ಭಟ್ ನ ಕರಾಳಮುಖವನ್ನು ಉತ್ತರ ಪ್ರದೇಶ ಮೂಲದ ಸಂತ್ರಸ್ತ ವಿದ್ಯಾರ್ಥಿನಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ನ್ಯಾಯವಾದಿ ಕಚೇರಿಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದಕ್ಕಾಗಿ ಆತ ತನ್ನನ್ನು ರಾತ್ರಿ 8 ಗಂಟೆವರೆಗೂ ಕಚೇರಿಯಲ್ಲೇ ಕೆಲಸ ಮಾಡಲು ಹೇಳಿದ್ದ. ಅದಲ್ಲದೆ, ರಾತ್ರಿ ವೇಳೆ ತನಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ. ಆದರೆ, ತಾನು ಆ ಮೆಸೇಜ್ಗಳಿಗೆ ಪ್ರತಿಕ್ರಿಯಿಸುತ್ತಿಲಿಲ್ಲ. ಇದೇ ರೀತಿ ಒಂದು ದಿನ ರಾತ್ರಿ 8 ಗಂಟೆ ತನಕ ಕೆಲಸ ಮಾಡಿಸಿದ್ದ ರಾಜೇಶ್ ಭಟ್, ಕಚೇರಿಯಲ್ಲಿ ಯಾರೂ ಇರದಿರುವುದನ್ನು ಕಂಡು ಛೇಂಬರ್ಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ. ಆ ಬಳಿಕ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದ. ಜೊತೆಗೆ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆಂದು ಸಂತ್ರಸ್ತೆ ದೂರಿದ್ದಾರೆ.
ಈಗಾಗಲೇ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣ ಠಾಣೆ ಮೆಟ್ಟಿಲೇರುತ್ತಿದ್ದಂತೆ ಸಂತ್ರಸ್ತೆಗೆ ಕರೆ ಮಾಡಿರುವ ಆರೋಪಿ ರಾಜೇಶ್ ಭಟ್, ಕೆಲಸಕ್ಕೆ ಬರುವಂತೆ ಸಂತ್ರಸ್ತೆಯನ್ನು ಪರಿಪರಿಯಾಗಿ ಬೇಡಿಕೊಂಡಿರುವ ಆಡಿಯೋ ವೈರಲ್ ಆಗಿದೆ. "ಗೊತ್ತಿಲ್ಲದೆ ತನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ದಯವಿಟ್ಟು ಕಚೇರಿಗೆ ಬಾ" ಎಂದು ಆತನೇ ಗೋಗರೆದಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.
Kshetra Samachara
24/10/2021 08:05 pm