ಅಂಪಾರು: ಅದನ್ನು ಆತ್ಮಹತ್ಯೆ ಪ್ರಕರಣ ಎಂದೇ ಭಾವಿಸಲಾಗಿತ್ತು. ಇನ್ನೇನು ಕೇಸು ಮುಚ್ಚಿಯೇ ಹೋಗುವುದರಲ್ಲಿತ್ತು, ಸತ್ತು 2 ದಿನಗಳ ನಂತರ ಸತ್ಯ ಬಯಲಾಗಿದೆ... ಏನಿದು ಪ್ರಕರಣ?
ಹೌದು. ಆತ್ಮಹತ್ಯೆ ಎಂದು ಬಿಂಬಿತವಾಗಿದ್ದ ಪ್ರಕರಣವೊಂದು ಕೊಲೆ ಎಂದು ಗೊತ್ತಾಗಿದೆ. ಇದು ನಡೆದಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರಿನಲ್ಲಿ. ನಾಗರಾಜ ಎಂಬವರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮನೆಯಲ್ಲೇ ಪತ್ತೆಯಾಗಿತ್ತು. ಪತ್ನಿ ಮಮತಾ ನೀಡಿದ ದೂರಿನ ಆಧಾರದಲ್ಲಿ, ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಿತ್ತು. ಪ್ರತಿದಿನ ಕುಡಿದು ರಂಪಾಟ ಮಾಡುತ್ತಿದ್ದಾತ, ಕುಡಿಯಲು ಹಣ ಸಿಗದೆ ಸತ್ತಿರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಪೋಸ್ಟ್ ಮಾರ್ಟಂ ಸಂದರ್ಭ ಮೈಮೇಲೆ ಗಾಯದ ಗುರುತು ಪತ್ತೆಯಾಗಿತ್ತು! ಅದಕ್ಕೆ ಪೂರಕವಾಗಿ ಶಿವಮೊಗ್ಗದಿಂದ ಸಹೋದರಿ ದೂರು ದಾಖಲಿಸಿ, ಆತ್ಮಹತ್ಯೆ ಬಗ್ಗೆ ನನಗೆ ಸಂಶಯ ಇದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದಿದ್ದರು!
" ನನ್ನ ತಮ್ಮ ಜೀವ ಕಳೆದುಕೊಳ್ಳುವ ವ್ಯಕ್ತಿಯಲ್ಲ. ಆತನ ಪತ್ನಿ ಮಮತಾ ಮತ್ತು ಕೆಲವರು ತಮ್ಮನಿಗೆ ದೈಹಿಕ ಹಲ್ಲೆ ನಡೆಸುತ್ತಿರುವ ಬಗ್ಗೆ ನನ್ನೊಂದಿಗೆ ಹೇಳಿಕೊಂಡಿದ್ದ. ಹಾಗಾಗಿ ಪತ್ನಿಯೇ ಇತರರೊಂದಿಗೆ ಸೇರಿ ತನ್ನ ಸಹೋದರ ನಾಗರಾಜನನ್ನು ಕೊಂದಿದ್ದಾಳೆ" ಎಂದು ದೂರು ನೀಡಿದ್ದರು.
ನಾಗರಾಜನ ಸಾವಿಗೆ ಪತ್ನಿಯೇ ಕಾರಣ ಅನ್ನೋದು ಗೊತ್ತಾಗಿದೆ. ಈಗ ಪತ್ನಿ ಮಮತಾ ಜೊತೆ ಒಟ್ಟು ಐವರ ಬಂಧನವಾಗಿದೆ. ಹೊಡೆದು, ಕೊಂದ ನಂತರ ನೇಣಿಗೆ ಶವ ಕಟ್ಟಿ, ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿರುವುದು ಬಯಲಾಗಿದೆ.
ನಾಗರಾಜ ಪ್ರತಿದಿನ ಕುಡಿದು, ಬಂದು ಹೆಂಡತಿಗೆ ಹೊಡೆಯುತ್ತಿದ್ದ. ಹಾಗಾಗಿ ಪತ್ನಿ ಮಮತಾಗೂ ರೋಸಿ ಹೋಗಿತ್ತು. ಪಕ್ಕದಲ್ಲೇ ಅಕ್ಕನ ಮನೆ ಇದೆ. ಭಾವ ಕುಮಾರ್ ನೆರವನ್ನು ಪಡೆದು, ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಕುಡಿದು ಅಮಲೇರಿಸಿಕೊಂಡು ಸಾಯಲು ಹೊರಟಿದ್ದ ನಾಗರಾಜನಿಗೆ ಇವರ ಹೊಡೆತ ಸಾಕಾಗಿದೆ! ಪೆಟ್ಟು ತಿಂದವ ಕುಸಿದು ಬಿದ್ದು ಮತ್ತೆ ಏಳಲೇ ಇಲ್ಲ! ಗಾಬರಿಗೊಂಡ ಮಮತಾ ಮತ್ತು ಕುಮಾರ್, ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ, ಈಗ ಎಲ್ಲ ಸತ್ಯ ಅನಾವರಣಗೊಂಡಿದೆ.
Kshetra Samachara
23/10/2021 04:43 pm