ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಹಫ್ತಾ ನೀಡಲು ನಿರಾಕರಣೆ; ಬಾರ್ ಮಾಲೀಕನ ಸ್ನೇಹಿತರಿಗೆ ತಲವಾರು ಹಲ್ಲೆ

ಬೈಂದೂರು: ಬಾರ್ ನಲ್ಲಿ ಸ್ಥಳ ಮಹಜರಿಗಾಗಿ ತೆರಳಿದ್ದ ವೇಳೆ ಆರೋಪಿಗಳ ತಂಡ ಏಕಾಏಕಿ ತಲವಾರಿನಲ್ಲಿ ಹಲ್ಲೆ ನಡೆಸಿದ ಘಟನೆ ಶಿರೂರು ಗ್ರಾಮದಲ್ಲಿ ನಡೆದಿದೆ. ದಾಳಿಯಿಂದ ಇಬ್ಬರು ಯುವಕರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರವಿ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ತಲವಾರು ದಾಳಿಗೊಳಗಾದವರು.

ಬೈಂದೂರು ತಾಲೂಕಿನ ಶಿರೂರು ಗ್ರಾಮದ ನೀರ್ಗದ್ದೆಯ ಸಿಲ್ವರ್ ಅರ್ಚ್ ಫ್ಯಾಮಿಲಿ ಬಾರ್ & ರೆಸ್ಟೋರೆಂಟ್ ಗೆ ಎರಡು ದಿನದ ಹಿಂದೆ ಬಂದಿದ್ದ ಕಿರಣ್ ಪೂಜಾರಿ ಹಾಗೂ ಅಶೋಕ್ , ಬಾರ್ ಮ್ಯಾನೇಜರ್ ಅಶ್ವಿಜ್ ಶೆಟ್ಟಿ ಬಳಿ ಹಫ್ತಾ ಕೊಡುವಂತೆ ಬೆದರಿಕೆಯೊಡ್ಡಿದ್ದಾರೆ. ಈ ವೇಳೆ ಮ್ಯಾನೇಜರ್ ಹಾಗೂ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಆರೋಪಿಗಳಾದ ಕಿರಣ್ ಪೂಜಾರಿ ಹಾಗೂ ಅಶೋಕ್ ಏಕಾಏಕಿ ಬಾಟಲಿಯಿಂದ ಅಶ್ವಿಜ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಮಹಜರಿಗಾಗಿ ಬಾರ್ ಮಾಲೀಕ ಕಾಲೋಡು ನಿವಾಸಿ ಅಣ್ಣಪ್ಪ ಶೆಟ್ಟಿಯವರು ತಮ್ಮ ಸ್ನೇಹಿತರಾದ ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳಾದ ಕಿರಣ್ ಪೂಜಾರಿ, ಅಶೋಕ ದೇವಾಡಿಗ ಅಣ್ಣಪ್ಪ ಶೆಟ್ಟಿಯವರ ಸ್ನೇಹಿತರೊಂದಿಗೆ ಜಗಳಕ್ಕಿಳಿದಿದ್ದಾರೆ.

ಅವಾಚ್ಯವಾಗಿ ಬೈದು ಅವರ ಪರವಾಗಿ ಬಂದರೆ ನಿಮ್ಮನ್ನೂ ಕೂಡ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತಲವಾರು ಹಾಗೂ ಹಾರೆಯಿಂದ ರವಿ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ತಲವಾರನ್ನು ಬೀಸಿದ್ದು, ಈ ಸಮಯ ರವಿ ಶೆಟ್ಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ರವಿ ಶೆಟ್ಟಿ ಬೆನ್ನಿಗೆ ತಗುಲಿ ಗಾಯವಾಗಿವೆ. ಘಟನೆ ವೇಳೆ ಪ್ರಶಾಂತ್ ಶೆಟ್ಟಿಯವರಿಗೂ ಗಾಯವಾಗಿವೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಹಫ್ತಾ ವಸೂಲಿ ಮತ್ತು ಇಸ್ಪೀಟ್ ದಂಧೆಯಲ್ಲಿ ತೊಡಗಿಕೊಂಡಿದ್ದು, ಇವರ ವಿರುದ್ಧ ಬೇರೆ ಬೇರೆ ಠಾಣೆಯಲ್ಲೂ ಪ್ರಕರಣಗಳಿವೆ ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

22/10/2021 09:12 pm

Cinque Terre

14.19 K

Cinque Terre

2

ಸಂಬಂಧಿತ ಸುದ್ದಿ