ಮಂಗಳೂರು: ವಾರಂಟ್ ಪ್ರಕರಣದಲ್ಲಿ ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸರ ಮೇಲೆಯೇ ನಟೋರಿಯಸ್ ರೌಡಿಯೋರ್ವನು ತಲವಾರು ಬೀಸಿ ಕೊಲೆಗೆ ಯತ್ನಿಸಿ, ಪರಾರಿಯಾಗಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಆತ ಪರಾರಿಯಾಗಲು ಸಹಕರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಕ್ಕಚ್ಚೇರಿ ಬಳಿಯ ಧರ್ಮನಗರ ನಿವಾಸಿ ನಟೋರಿಯಸ್ ರೌಡಿ ಮುಕ್ತಾರ್ ಅಹ್ಮದ್ ಎಂಬಾತನ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಕೇಸುಗಳಿವೆ. ಆದರೆ ಆತ ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟ್ ನಿಂದ ವಾರಂಟ್ ಪಡೆದು ಬಂಧಿಸಲು ಇಂದು ಬೆಳಗ್ಗೆ ಆತನ ಮನೆಗೆ ತೆರಳಿದ್ದರು. ಆಗ ತಲವಾರು ಹಿಡಿದುಕೊಂಡೇ ಮನೆಯಿಂದ ಹೊರಬಂದ ಮುಕ್ತಾರ್ ಅಹ್ಮದ್, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲಿಂದ ತಲವಾರು ತೋರಿಸುತ್ತಲೇ ನಿಜಾಮುದ್ದೀನ್ ಎಂಬವನ ಬೈಕಿನಲ್ಲಿ ಪರಾರಿಯಾಗಿದ್ದಾನೆ.
ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಅಡ್ಡಹಾಕಿ ಬೈಕನ್ನು ಹಿಡಿದಿದ್ದಾರೆ. ಅಷ್ಟರಲ್ಲಾಗಲೇ ಮುಕ್ತಾರ್ ಅಹ್ಮದ್ ಎಸ್ಕೇಪ್ ಆಗಿದ್ದಾನೆ. ಬೈಕಿನಲ್ಲಿದ್ದ ನಿಜಾಮುದ್ದೀನ್ ಎಸ್ಕೇಪ್ ಆಗುವ ಯತ್ನದಲ್ಲಿ ಮುಂದಿನಿಂದ ಬಂದ ವ್ಯಾಗನರ್ ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ, ನಿಜಾಮುದ್ದೀನ್ ನನ್ನು ಬಂಧಿಸಿದ್ದಾರೆ. ಇದೀಗ ಮುಕ್ತಾರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Kshetra Samachara
21/10/2021 04:21 pm