ಮಂಗಳೂರು: ಬೈಕ್ ನಲ್ಲಿ ಬಂದ ಮೂವರು ಅಪರಿಚಿತರ ತಂಡವೊಂದು ಅಂಗಡಿಗೆ ಬಾಗಿಲು ಮುಚ್ಚಿ ಹೊರಬರುತ್ತಿದ್ದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಇಂದು ಬೆಳಕಿಗೆ ಬಂದಿದೆ.
ಕೊಣಾಜೆಯಲ್ಲಿರುವ ಮಂಗಳೂರು ವಿವಿಯ ಇಂಡೋರ್ ಸ್ಟೇಡಿಯಂ ಸಮೀಪ ಇರುವ ದುರ್ಗಾ ಫ್ಯಾನ್ಸಿ ಆ್ಯಂಡ್ ಜನರಲ್ ಸ್ಟೋರ್ ಮಾಲೀಕ ಪ್ರಕಾಶ್ ಅಪಾಯದಿಂದ ಪಾರಾದವರು. ಪ್ರಕಾಶ್ ಬಿಜೆಪಿಯ ಸ್ಥಳೀಯ ಮುಖಂಡ ಹಾಗೂ ಕೊಣಾಜೆ ಗ್ರಾಪಂನ ಮಾಜಿ ಸದಸ್ಯರಾಗಿದ್ದಾರೆ.
ಇವರು ಕಳೆದ ರಾತ್ರಿ ಕೆಲಸ ಮುಗಿಸಿ ಮನೆ ಕಡೆಗೆ ಹೊರಡುತ್ತಿದ್ದಾಗ ರಸ್ತೆ ಸಮೀಪ ಹೊಂಚು ಹಾಕಿ ಕುಳಿತಿದ್ದ ಮೂವರು ಅಪರಿಚಿತರು ತಲವಾರು ಬೀಸಿದ್ದರೆನ್ನಲಾಗಿದೆ. ಈ ಸಂದರ್ಭ ದಾಳಿಯಿಂದ ತಪ್ಪಿಸಿಕೊಂಡರೂ ತೋಳಿಗೆ ಸ್ವಲ್ಪ ಗಾಯವಾಗಿದೆ ಎಂದು ಪ್ರಕಾಶ್, ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/10/2021 04:12 pm