ಬಂಟ್ವಾಳ: ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಪುಸಲಾಯಿಸಿ ಮಂಗಳೂರಿಗೆ ಬರಹೇಳಿ ಅಲ್ಲಿನ ಲಾಡ್ಜ್ ಒಂದರಲ್ಲಿ ಸಂಗಡಿಗರೊಂದಿಗೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಅವರೆಲ್ಲರನ್ನೂ ಬಂಧಿಸಲಾಗಿದೆ.
ಪ್ರಕರಣದಲ್ಲಿ ಬಾಲಕಿಯ ದೂರು ಮತ್ತು ಆರೋಪಿಗಳ ವಿಚಾರಣೆ ಬಳಿಕ ಇಡೀ ಪ್ರಕರಣದಲ್ಲಿ ಬಾಲಕಿಯ ಪರಿಚಿತರಾದ ಇಬ್ಬರು ಸೇರಿದಂತೆ ಒಟ್ಟು ನಾಲ್ವರಷ್ಟೇ ಆರೋಪಿಗಳಿರುವುದು ಖಚಿತವಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಅಡಿಷನಲ್ ಎಸ್ಪಿ ಡಾ. ಶಿವಕುಮಾರ್ ಮಾರ್ಗದರ್ಶನದಲ್ಲಿ, ಎಎಸ್ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್ಸೈ ಅವಿನಾಶ್ ಗೌಡ ಸಹಿತದ ಪೊಲೀಸರ ತಂಡ ಬಾಲಕಿಯ ದೂರಿನ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೇರೆ ಬೇರೆ ಪ್ರದೇಶಗಳಲ್ಲಿದ್ದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಂಗಳೂರಿನಲ್ಲಿ ಈ ಕೃತ್ಯ ನಡೆದದ್ದು ಕಂಡುಬಂದಿರುವುದಾಗಿ ತಿಳಿಸಿದರು.
ಆರಂಭದಲ್ಲಿ ತನ್ನನ್ನು ಕಾರಿನಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿದ ದೂರಿನಂತೆ ತನಿಖೆ ನಡೆಸಿದ ವೇಳೆ ಈ ಅಂಶ ಬಯಲಿಗೆ ಬಂತು ಎಂದು ಎಸ್ಪಿ ಹೇಳಿದರು.
ಬಂಧಿತ ಆರೋಪಿಗಳಾದ ಕಾಪು ನಿವಾಸಿ ಕೆ.ಎಸ್. ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಇದಾಯತ್ತುಲ್ಲ ಎಂಬವರನ್ನು ಭಾನುವಾರ ಮಧ್ಯಾಹ್ನ ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಎಸ್ಪಿ ಶಿವಾಂಶು ರಜಪೂತ್ ನೇತೃತ್ವದ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್ಸೈ ಅವಿನಾಶ್ ಗೌಡ ಹಾಗೂ ಸಹಕರಿಸಿದ ಎಸ್ಸೈ ಪ್ರಸನ್ನ ಉಪಸ್ಥಿತರಿದ್ದರು.
Kshetra Samachara
10/10/2021 02:48 pm