ಮಂಗಳೂರು: ವಿವಾಹವಾಗಿ ಮಗು ಜನಿಸಿದ ಬಳಿಕ ಪತಿ ತನ್ನನ್ನು ತೊರೆದು ಬೇರೊಬ್ಬಾಕೆಯನ್ನು ವಿವಾಹವಾಗಿದ್ದಾನೆಂದು ಮಂಗಳೂರಿನ ಮಹಿಳಾ ಠಾಣೆಯಲ್ಲಿ ಮಹಿಳೆಯೋರ್ವರು ದೂರು ದಾಖಲಿಸಿದ್ದಾರೆ.
ಬೆಂಗಳೂರು ಮೂಲದ ರಾಘವೇಂದ್ರ ಕುಲಕರ್ಣಿ ತನಗೆ ವಂಚಿಸಿದ್ದಾನೆಂದು ಮೂಡುಬಿದಿರೆ ತಾಲೂಕಿನ ಬೆಳುವಾಯಿ ನಿವಾಸಿ ಆತನ ಪತ್ನಿ ದೂರು ದಾಖಲಿಸಿದ್ದಾರೆ. '2017ರ ಜೂ.18ರಂದು ಆರೋಪಿ ರಾಘವೇಂದ್ರ ಕುಲಕರ್ಣಿಯು ತನ್ನನ್ನು ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾನೆ. ಆ ಸಂದರ್ಭ ಆತ ನಮ್ಮಿಂದ 1 ಲಕ್ಷ ರೂ. ವರದಕ್ಷಿಣೆ ಪಡೆದಿದ್ದ. ಮದುವೆಯಾದ ಬಳಿಕ ಆತ ದೈಹಿಕ, ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದಾನೆ. ಆ ಬಳಿಕ ನಾನು ಗರ್ಭಿಣಿಯಾಗಿದ್ದೆ. ಬಳಿಕ ನನ್ನ ತಂದೆ ಮೃತಪಟ್ಟಿದ್ದರಿಂದ ನಾನು ಊರಿಗೆ ವಾಪಸಾಗಿದ್ದೆ. ಆದರೆ ಮಗು ಹುಟ್ಟಿದ ಬಳಿಕ ಆತ ಮತ್ತೆ ನಮ್ಮನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲೇ ಇಲ್ಲ. ನಮ್ಮನ್ನು ಬೆಂಗಳೂರಿಗೆ ಕರೆದೊಯ್ಯದ ಹಿನ್ನೆಲೆಯಲ್ಲಿ ನನ್ನ ತಾಯಿ ನನ್ನನ್ನು ಹಾಗೂ ಮಗುವನ್ನು ಬೆಂಗಳೂರಿನ ಪತಿಯ ಮನೆಗೆ ಕರೆದೊಯ್ದು ಬಿಟ್ಟು ಬಂದಿದ್ದಾರೆ. ಆದರೆ ಪತಿ ರಾಘವೇಂದ್ರ ಕುಲಕರ್ಣಿ ಮತ್ತೆ ದೈಹಿಕ ಮಾನಸಿಕ ಹಿಂಸೆ ನೀಡಿ ಅಲ್ಲಿಂದ ಮತ್ತೆ ತವರು ಮನೆಗೆ ಕಳುಹಿಸಿದ್ದಾನೆ. ಬಳಿಕ ತವರು ಮನೆಗೂ ಬಂದು ಹಿಂಸೆ ನೀಡಿದ್ದಾನೆ' ಎಂದು ಮಹಿಳೆ ದೂರಿದ್ದಾರೆ.
ಇತ್ತೀಚಿಗೆ ನನ್ನ ಫೋನ್ ಕರೆಯನ್ನು ಸ್ವೀಕರಿಸದಿರುವುದನ್ನು ನೋಡಿ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ಆತ ಮತ್ತೊಂದು ವಿವಾಹವಾಗಿರುವುದು ತಿಳಿದು ಬಂದಿದೆ. ಆತ ನನ್ನನ್ನು ಮದುವೆಯಾಗುವ ಮೊದಲು ಒಂದು ಮದುವೆಯಾಗಿ ಆಕೆಗೆ ವಿಚ್ಛೇದನ ನೀಡಿದ್ದ. ಅದನ್ನು ನನಗೆ ತಿಳಿಸದೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
05/10/2021 10:35 am