ಮಂಗಳೂರು: ಬ್ಯಾಂಕಿಗೆ ದುಡ್ಡು ಕಟ್ಟಲು ತೆರಳುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್ ರೊಬ್ಬರಿಗೆ ಹಲ್ಲೆಗೈದು 4.20 ಲಕ್ಷ ರೂ. ಹಣವನ್ನು ದರೋಡೆಗೈದ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ.
ನಗರದ ಗಾಂಧಿನಗರದಲ್ಲಿರುವ ಪೆಟ್ರೋಲ್ ಬಂಕ್ ಮ್ಯಾನೇಜರ್ ಭೋಜಪ್ಪ (57) ಮಧ್ಯಾಹ್ನ 12.30ರ ಸುಮಾರಿಗೆ ಚಿಲಿಂಬಿಯಲ್ಲಿರುವ ಸಾರಸ್ವತ್ ಬ್ಯಾಂಕ್ ಶಾಖೆಗೆ ನಗದು ಕಟ್ಟಲೆಂದು 4.20 ಲಕ್ಷ ಹಣ ರೂ.ವನ್ನು ಬ್ಯಾಗಿನಲ್ಲಿರಿಸಿ ಬೈಕಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಅವರು, ಚಿಲಿಂಬಿಯಲ್ಲಿ ಬೈಕನ್ನು ಯು ಟರ್ನ್ ಮಾಡುತ್ತಿದ್ದರು. ಈ ಸಂದರ್ಭ ಸ್ವಿಗ್ಗಿ ಸಂಸ್ಥೆಯ ಟೀ ಶರ್ಟ್ ಧರಿಸಿಕೊಂಡು ಬೈಕಿನಲ್ಲಿ ನಿಂತಿದ್ದ ಇಬ್ಬರು ಆಗಂತುಕರು ಕ್ರಿಕೆಟ್ ಬ್ಯಾಟಿನಲ್ಲಿ ಅವರಿಗೆ ಹಲ್ಲೆ ನಡೆಸಿ ಬ್ಯಾಗ್ ಅನ್ನು ದರೋಡೆಗೈದಿದ್ದಾರೆ.
ಹಲ್ಲೆಯಿಂದ ಭೋಜಪ್ಪನವರ ತಲೆ, ಭುಜಕ್ಕೆ ಏಟಾಗಿದೆ, ಭೋಜಪ್ಪನವರು ಹೆಲ್ಮೆಟ್ ಧರಿಸಿದ್ದರಿಂದ ಅಪಾಯದಿಂದ ಅವರು ಪಾರಾಗಿದ್ದಾರೆ. ಭೋಜಪ್ಪನವರು ಪೆಟ್ರೋಲ್ ಬಂಕ್ ಕಲೆಕ್ಷನ್ ಹಣವನ್ನು ಬ್ಯಾಂಕಿಗೆ ಕಟ್ಟಲು ತೆರಳುತ್ತಿರುವುದು ಮೊದಲೇ ತಿಳಿದು ಹೊಂಚು ಹಾಕಿ ಹಲ್ಲೆಗೈದು ದರೋಡೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದರೋಡೆಕೋರರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
Kshetra Samachara
28/09/2021 07:08 pm