ಕಡಬ: ಪ್ರಕರಣವೊಂದರಲ್ಲಿ ಸಂತ್ರಸ್ತೆಯಾಗಿದ್ದ ಬಾಲಕಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ವಿರುದ್ಧ ಕೊನೆಗೂ ದೂರು ನೀಡಲಾಗಿದೆ.
ಬಾಲಕಿಯ ತಂದೆ ದೂರು ನೀಡಿದ್ದು, ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಇದೀಗ ಗರ್ಭಿಣಿಯಾಗಲು ಕಾರಣನಾಗಿದ್ದಾನೆ. ಗರ್ಭಪಾತ ಮಾಡಿಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ. ಅಲ್ಲದೆ ಗರ್ಭಪಾತ ನಡೆಸಲು ಹಣವನ್ನು ಕೂಡ ಪೊಲೀಸ್ ಸಿಬ್ಬಂದಿ ಶಿವರಾಜ್ ನೀಡಿದ್ದಾನೆ ಎಂದು ಅಪ್ರಾಪ್ತೆಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.
ತಂದೆ ನೀಡಿರುವ ದೂರಿನ ಸಾರಾಂಶ:
ನಾನು ಹಾಗೂ ನನ್ನ ಪತ್ನಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ನನ್ನ ಮಗಳು ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯಾಗಿದ್ದು, ಪ್ರಕರಣ ಆರು ತಿಂಗಳ ಹಿಂದೆ ಮುಗಿದಿದಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ಎಂಬಾತ ಯಾವುದೋ ದಾಖಲೆ, ಸಮನ್ಸ್ ನೀಡುವ ವಿಚಾರಕ್ಕೆ ಮನೆಗೆ ಬರುತ್ತಿದ್ದ. ಈ ವೇಳೆ ಪರಿಚಯವಾಗಿದ್ದ ಶಿವರಾಜ್ ಪ್ರಕರಣ ಮುಗಿದಿದ್ದರೂ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಆದರೆ ನನಗೆ ಇಂತಹ ಕೆಟ್ಟ ಚಾಳಿ ಇರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಆದರೆ ಇತ್ತೀಚೆಗೆ ದೈಹಿಕ ಬೆಳವಣಿಗೆಯಲ್ಲಿ ಏರು ಪೇರಾಗಿ ಮಗಳು ಗರ್ಭಿಣಿ ಆಗಿರುವುದು ತಿಳಿದು ಬಂದು ಮಗಳನ್ನು ವಿಚಾರಿಸಿದಾಗ ಕಡಬ ಪೋಲಿಸ್ ಶಿವರಾಜ್ ಎಂಬಾತ ನನ್ನನ್ನು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆದುದರಿಂದ ನನಗೆ ಐದೂವರೆ ತಿಂಗಳು ಆಗಿದೆ ಎಂದು ಸತ್ಯ ಬಾಯಿಬಿಟ್ಟಿದ್ದಳು.
ನಾನು ಶಿವರಾಜ್ ನನ್ನು ಸಂಪರ್ಕ ಮಾಡಿ ನನ್ನ ಮಗಳನ್ನು ಮದುವೆಯಾಗು ಎಂದು ಹೇಳಿದ್ದೆ. ಆದರೆ ಆತ ನಾನು ಮದುವೆಯಾಗುವುದಿಲ್ಲ, ಗರ್ಭಿಣಿ ಆಗಿದ್ದರೆ ಅದನ್ನು ಗರ್ಭಪಾತ ಮಾಡಿಸುತ್ತೇನೆ. ಅದಕ್ಕೆ ತಗಲುವ ಖರ್ಚು ಕೊಡುತ್ತೇನೆ ಎಂದು ಹೇಳಿದ್ದ. ಇದಕ್ಕೆ ನಾನು ನೀನು ಖರ್ಚು ಕೊಡುವುದು ಬೇಡ, ಅಬಾರ್ಷನ್ ಮಾಡಿಸುವುದೂ ಬೇಡ ಎಂದು ಹೇಳಿದ್ದೆ. ಬಳಿಕ ನಾನು ತುಂಬಾ ಅಘಾತಗೊಳಗಾಗಿದ್ದೆ. ಹೀಗಿರುವಾಗ 18-09-2021ರಂದು ನನ್ನ ಹೆಂಡತಿ ಹಾಗೂ ಮಗಳು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ. ಪತ್ನಿ ನನಗೆ ಫೋನ್ ಮಾಡುತ್ತಾಳೆ ಆದರೆ ಎಲ್ಲಿದ್ದೇನೆ ಎಂದು ಹೇಳುತ್ತಿಲ್ಲ. ಅಬಾರ್ಷನ್ ಮಾಡಲಾಗಿದೆ ಅದಕ್ಕೆ 35,000 ರೂ. ಶಿವರಾಜ್ ಪೊಲೀಸ್ ಆನ್‌ಲೈನ್ ಮೂಲಕ ಪಾವತಿಸಿದ್ದಾನೆಂದು ನಾವು ಒಂದು ಕಡೆ ಇದ್ದೇವೆ, ಎಲ್ಲಿ ಅಂತ ಹೇಳುವುದಿಲ್ಲ ಎಂದು ನನ್ನ ಪತ್ನಿ ಹೇಳುತ್ತಿದ್ದಾಳೆ.
ಆದುದರಿಂದ ಅತ್ಯಾಚಾರ ಎಸಗಿರುವ ಶಿವರಾಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನನ್ನ ಮಗಳು, ಪತ್ನಿ ಶಿವರಾಜ್ ಅವನ ಸುಪರ್ಧಿಯಲ್ಲಿ ಮಂಗಳೂರಿನ ಎಲ್ಲಿಯೋ ಅಜ್ಞಾತ ಸ್ಥಳದಲ್ಲಿರುವ ಅವರನ್ನು ಪತ್ತೆ ಹಚ್ಚಬೇಕು. ಇದಕ್ಕೆಲ್ಲ ಪೋಲಿಸ್ ಪ್ರಭಾವ ಬಳಸಿ ನಮ್ಮನ್ನು ಬೆದರಿಸುತ್ತಿರುವ ಶಿವರಾಜ್ ವಿಚಾರಣೆ ನಡೆಸಿದಾಗ ಎಲ್ಲ ವಿಚಾರ ಬಹಿರಂಗವಾಗಲಿದೆ. ಆದುದರಿಂದ ನನ್ನ ಮಗಳಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಕೊಡುವಿರಾ ಎಂದು ಅವರು ವಿನಂತಿಸಿದ್ದಾರೆ.
ವಿ.ಹಿಂ.ಪ. ಹೋರಾಟದ ಎಚ್ವರಿಕೆ.
ಈ ಮಧ್ಯೆ ಆರೋಪಿಯನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ,ಇನ್ನಾದರೂ ಕ್ರಮ ಕೈಗೊಳ್ಳಬಹುದಲ್ವೆ ಎಂದು ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಭಾಸ್ಕರ ಧರ್ಮಸ್ಥಳ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ , ಕಾರ್ಯದರ್ಶಿ ಪ್ರಮೋದ್ ರೈ ಅವರುಗಳು ಎಚ್ಚರಿಸಿದ್ದಾರೆ.
ಮುಖ್ಯ ಮಂತ್ರಿಗಳಿಗೆ ದೂರು
ನೀತಿ ಸಾಮಾಜಿಕ ಸಂಘಟನೆ ಕಡೆಯಿಂದ ಕರ್ನಾಟಕ ಮುಖ್ಯಮಂತ್ರಿಗಳಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇನ್ನೊಂದು ದೂರು ದಾಖಲಾಗಿದೆ.
Kshetra Samachara
27/09/2021 09:28 pm