ಮಂಗಳೂರು : ಉಗ್ರರು ವಿಧ್ವಂಸಕ ಕೃತ್ಯ ಎಸಗಲು ಕರಾವಳಿ ಭಾಗದಲ್ಲಿ ಸಂಚು ರೂಪಿಸುತ್ತಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿಯನ್ನುಕೇಂದ್ರ ಗುಪ್ತಚರ ಇಲಾಖೆ ಹೇಳಿದೆ. ಹಬ್ಬದ ಸಂದರ್ಭದಲ್ಲಿ ಕರಾವಳಿಯಲ್ಲಿ ಜಾಸ್ತಿ ಜನಸಂದಣಿ ಸೇರುವ ಜಾಗದಲ್ಲಿ ಉಗ್ರರು ಯೋಜನೆ ಹಾಕಿರುವ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಹೈಅಲರ್ಟ್ ಆಗಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತುರಾಯ ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಸಂಶಯಾಸ್ಪದ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ಕೂಡ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲ ಅರಣ್ಯ ಭಾಗ, ಉತ್ತರ ಕನ್ನಡದ ಕೆಲ ಭಾಗ ಮತ್ತು ಉಡುಪಿಯಲ್ಲಿ ಈ ಸ್ಯಾಟಲೈಟ್ ಫೋನ್ ಗಳು ನಿಗೂಢ ವ್ಯಕ್ತಿ ಜೊತೆ ಸಂಪರ್ಕ ಸಾಧ್ಯ ಮಾಡಿತ್ತು.
ಬಳಿಕ ಅಧಿಕಾರಿಗಳು ನೆಟ್ ವರ್ಕ್ ಟ್ರೇಸಿಂಗ್ ಆಧರಿಸಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಫೋನ್ ಗಳು ಅರಣ್ಯ ಅಂಚಿನ ರಸ್ತೆಯಲ್ಲಿ ಸಂಪರ್ಕ ಸಾಧಿಸಿರುವ ಬಗ್ಗೆ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಕರಾವಳಿಯಲ್ಲಿ ಉಗ್ರ ಸಂಪರ್ಕ ಇರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಕರಾವಳಿಯ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
Kshetra Samachara
18/09/2021 11:03 pm