ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉದನೆ ಎಂಬಲ್ಲಿರುವ ಗಣಪತಿ ಕಟ್ಟೆಯನ್ನು ಕಲ್ಲು ಎತ್ತಿ ಹಾಕಿ ಹಾನಿಗೊಳಿಸಿರುವ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರದ ಬಾಗಲ್ ಪುರ ಜಿಲ್ಲೆಯ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ನಿವಾಸಿ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶುಕ್ರವಾರದಂದು ಉದನೆ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆ ಆರೋಪಿಯು ಬಾಳೆಗಿಡಗಳನ್ನು ಕಿತ್ತೆಸೆದು ಕಲ್ಲು ಎತ್ತಿಹಾಕಿ ಮೆಟ್ಟಿಲನ್ನು ಹಾನಿಗೊಳಿಸಿರುವುದು ಕಂಡುಬಂದಿತ್ತು.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಘಟನೆ ನಡೆದು 24 ಗಂಟೆಗಳ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
Kshetra Samachara
12/09/2021 11:13 am