ಮಂಗಳೂರು: ನಗರದ ಬಿಜೈ ಬಳಿಯ ಅಪಾರ್ಟ್‌ಮೆಂಟೊಂದರ ಗೋಡೆಯಲ್ಲಿ ಉಗ್ರ ಪರ ಬರಹ ಬರೆದ ಮತ್ತಿಬ್ಬರು ಆರೋಪಿಗಳಿಗೆ ಜಾಮೀನು ದೊರೆತಿದ್ದು, ಅವರು ಬಿಡುಗಡೆ ಹೊಂದಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್, ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ಮತ್ತು ಸಾದತ್ ಹುಸೇನ್ ಈ ಪ್ರಕರಣದಲ್ಲಿ ಬಂಧಿತರಾಗಿದ್ದರು. ಇವರಲ್ಲಿ ಮಾಝ್ ಮುನೀರ್ ಬಂಧಿತನಾಗಿ ಎರಡು ತಿಂಗಳಿನಲ್ಲಿ ಮಂಗಳೂರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿತ್ತು. ಜಾಮೀನು ದೊರೆಯದೆ ಕಾರಾಗೃಹದಲ್ಲಿದ್ದ ಇನ್ನಿಬ್ಬರು ಆರೋಪಿಗಳಾದ ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ಮತ್ತು ಸಾದತ್ ಹುಸೇನ್ ಹೈಕೋರ್ಟ್‌ನಿಂದ ಇದೀಗ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.
2020 ನ.27ರಂದು ಕದ್ರಿ ಠಾಣೆಯ ಬಳಿ ಬಿಜೈ ಅಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಈ ಬರಹ ಕಂಡು ಬಂದಿತ್ತು. ಈ ಗೋಡೆ ಬರಹದಲ್ಲಿ 'ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜೊತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಬರುವಂತೆ ಮಾಡಬೇಡಿ. ಲಷ್ಕರ್ ಝಿಂದಾಬಾದ್, ತಾಲಿಬಾನ್ ಝಿಂದಾಬಾದ್’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿತ್ತು. ಈ ಗೋಡೆ ಬರಹ ಪ್ರಕರಣದಿಂದ ಇಡೀ ದೇಶದಲ್ಲಿಯೇ ತಲ್ಲಣ ಉಂಟಾಗುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ಬಂದು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಆದರೆ, ಇವರಿಗೆ ಉಗ್ರರೊಂದಿಗೆ ಯಾವುದೇ ರೀತಿಯ ನಂಟು ಇಲ್ಲ ಎಂದು ವಿಚಾರಣೆಯಿಂದ ತಿಳಿದು ಬಂದಿತ್ತು.
Kshetra Samachara
08/09/2021 10:57 pm