ಸುರತ್ಕಲ್: ನಗರದ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಆರೋಪಿಯನ್ನು ಸುರತ್ಕಲ್ ಸಮೀಪದ ಮಧ್ಯ ನಿವಾಸಿ, ಮೂಲತಃ ಬಾಗಲಕೋಟೆಯ ಜಗನ್ನಾಥ್ (34) ಎಂದು ಗುರುತಿಸಲಾಗಿದೆ. ಆತನಿಂದ 1.06 ಲಕ್ಷ ರೂ ನಗದು, 5ಮೊಬೈಲ್, 20ಕ್ಕೂ ಹೆಚ್ಚು ಸಿಮ್ ಹಾಗೂ ಫೈನಾನ್ಸ್‌ನಲ್ಲಿ ಇಡಲಾಗಿದ್ದ 116 ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಜಗನ್ನಾಥ್ ಸುರತ್ಕಲ್ ಖಾಸಗಿ ಆಸ್ಪತ್ರೆ ಉದ್ಯೋಗಿ ಯುವತಿಗೆ ಮೇಟ್ರಿಮೋನಿಯಲ್ಲಿ ಪರಿಚಯವಾಗಿದ್ದು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಫ್ಲಾಟ್ ಖರೀದಿಸಲೆಂದು 3 ಲಕ್ಷ ರೂ. ಪಡೆದಿದ್ದ ಎನ್ನಲಾಗಿದೆ. ಜಗನ್ನಾಥ್‌ನನ್ನು ನಂಬಿದ ಯುವತಿ ಚಿನ್ನಾಭರಣ ಅಡವಿರಿಸಿ ಹಣ ನೀಡಿದ್ದಳು.
ಈ ನಡುವೆ ನಾಟಕವಾಡಿ 1.5.ಲಕ್ಷ ರೂ. ವಾಪಸ್ ನೀಡಿ ವಿಶ್ವಾಸ ಪಡೆದುಕೊಳ್ಳಲು ಯತ್ನಿಸಿದ್ದ. ಬಳಿಕ ಅದನ್ನೂ ವಾಪಸ್ ಪಡೆದುಕೊಂಡಿದ್ದ ಎಂದು ಯುವತಿ ಸುರತ್ಕಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಜಗನ್ನಾಥ್ ಹಲವು ಹೆಸರಿನಲ್ಲಿ ಅನೇಕರಿಗೆ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
02/09/2021 11:17 pm