ಕೋಟ: ಬ್ರಹ್ಮಾವರ ಸಮೀಪದ ಸಾಸ್ತಾನ ಮಾಬುಕಳದಲ್ಲಿನ ಕೆನರಾ ಬ್ಯಾಂಕ್‌ಗೆ ಸೇರಿದ ಎ.ಟಿ.ಎಂ.ನಿಂದ 16,700 ರೂ ದರೋಡೆಗೈದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಎ.ಟಿ.ಎಂ. ರಾತ್ರಿಯೂ ತೆರೆದಿದ್ದು, ಸಿ.ಸಿ. ಟಿವಿಯ ವೈಯರ್ ಕಡಿತಗೊಳಿಸಿಕೊಂಡು ಒಳನುಗ್ಗಿದ ದುಷ್ಕರ್ಮಿಗಳು ಯಂತ್ರವನ್ನು ಒಡೆದಿದ್ದಾರೆ. ಈ ಸಂದರ್ಭ ಹಣವಿರುವ ಮುಖ್ಯ ಪೆಟ್ಟಿಗೆಯನ್ನು ತೆರೆಯಲು ಸಾಧ್ಯವಾಗಿಲ್ಲ, ಆದರೆ ರಿಜೆಕ್ಟ್ ನೋಟ್ ಗಳು ಸಂಗ್ರಹವಾಗುವ ಪೆಟ್ಟಿಗೆಯಲ್ಲಿ 16,700 ರೂ ಸಂಗ್ರಹವಾಗಿದ್ದು ಅದನ್ನು ಕಳವುಗೈದಿದ್ದಾರೆ ಹಾಗೂ ಸಿ.ಸಿ.ಟಿವಿ. ಡಿ.ವಿ.ಆರ್. ಬಾಕ್ಸ್ ಕೂಡ ಹೊತ್ತೊಯ್ದಿದ್ದಾರೆ. ಎ.ಟಿ.ಎಂ.ಗೆ ಅಳವಡಿಸಿದ ಎ.ಸಿ.ಯನ್ನು ಕದ್ದೊಯ್ಯಲು ವಿಫಲ ಯತ್ನ ನಡೆಸಿದ್ದಾರೆ.
ಸ್ಥಳೀಯ ಗ್ರಾಹಕರೋರ್ವರು ಬೆಳಗ್ಗೆ ಹಣ ನಗದೀಕರಿಸಲು ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ಎ.ಟಿ.ಎಂ.ಗೆ ಭದ್ರತಾ ಸಿಬಂದಿ ನೇಮಿಸದಿರುವ ಕಾರಣ ದುಷ್ಕರ್ಮಿಗಳಿಗೆ ಕೃತ್ಯವೆಸಗುವುದು ಸುಲಭವಾಗಿದೆ.
ಉಡುಪಿ ಹೆಚ್ಚುವರಿ ಎಸ್.ಪಿ. ಕುಮಾರ್ಚಂದ್ರ, ಎ.ಎಸ್.ಪಿ. ಸುಧಾಕರ್ ನಾಯಕ್, ಬ್ರಹ್ಮಾವರ ವೃತನಿರೀಕ್ಷಕ ಆನಂತಪದ್ಮನಾಭ, ಕೋಟ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ.. ಕ್ರೈಂ ವಿಭಾಗದ ಉಪನಿರೀಕ್ಷಕಿ ಪುಷ್ಪಾ, ಬ್ರಹ್ಮಾವರ ಠಾಣೆ ಉಪನಿರೀಕ್ಷಕ ಗುರುನಾಥ ಹಾದಿಮನೆ ಹಾಗೂ ಸಿಬಂದಿಗಳು, ಬೆರಳಚ್ಚು ತಂಡದವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
13/08/2021 08:19 pm