ಸುರತ್ಕಲ್: ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ವಿದ್ಯಾದಾಯಿನೀ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‌ನಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಆರೋಪಿ ಯುವಕನನ್ನು ಕೆಲವೇ ಕ್ಷಣಗಳಲ್ಲಿ ಪೊಲೀಸರು ಸಿನಿಮೀಯ ರೀತಿ ಬಂಧಿಸಿದ್ದಾರೆ.
ಆರೋಪಿಯನ್ನು ಕೊಪ್ಪ ಮೂಲದ ಹೊಸಬೆಟ್ಟು ನಿವಾಸಿ ಕೆ.ಎಸ್. ಶ್ರೇಯಸ್ (24) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುರತ್ಕಲ್ ಶಾಲೆಯ ಖಾಸಗಿ ಪ್ರೌಢ ಶಿಕ್ಷಕಿ ಶ್ರೀವಿದ್ಯಾ ಶಾಲೆಯ ಬಳಿಯ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಆರೋಪಿ ಶ್ರೇಯಸ್ ಕುತ್ತಿಗೆಯಿಂದ 2 ಪವನ್ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಶಿಕ್ಷಕಿ ಹೆದ್ದಾರಿ ದಾಟಲು ಅಂಡರ್ ಪಾಸ್ ಪ್ರವೇಶಿಸಿದಾಗ ಕಾದು ಕುಳಿತು ಈ ಕೃತ್ಯ ಎಸಗಿದ್ದು ಶಿಕ್ಷಕಿ ನೀಡಿದ ದೂರಿನಂತೆ ಕಾರ್ಯಪ್ರವೃತ್ತರಾದ ಸುರತ್ಕಲ್ ಪೊಲೀಸರು ಕೆಲವೇ ಕ್ಷಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ಜಾಕೆಟ್‌ನಲ್ಲಿದ್ದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಶ್ರೇಯಸ್ ಕಾಲೇಜ್ ಬಿಸಿಎ ಪೂರ್ಣಗೊಳಿಸಿದ್ದಾನೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ಕ್ರೈಮ್ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಮೇಲಧಿಕಾರಿಗಳು, ಸಾರ್ವಜನಿಕರು ಶ್ಲಾಘಿಸಿದ್ದಾರೆ. ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ಸಿಸಿಟಿವಿ ಇತ್ಯಾದಿ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ದುಷ್ಕರ್ಮಿಗಳಿಗೆ ಕೃತ್ಯ ನಡೆಸಲು ಸುಲಭವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಂಡರ್ ಪಾಸ್ ಸದ್ಯಕ್ಕೆ ಮುಚ್ಚಿ ಬಿಡಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Kshetra Samachara
05/08/2021 12:29 pm