ಹಣ...ಹಣ...ಹಣ...
ಬಿತ್ತು ಫಿನಾನ್ಶಿಯರ್ ಹೆಣ!
ಕುಂದಾಪುರ: ಇದ್ದಕ್ಕಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಕ್ರೈಂ ರೇಟ್ ಒಂದೇ ಸಮನೆ ಏರುತ್ತಿದೆ.ಒಂದರ ಹಿಂದೆ ಇನ್ನೊಂದು ಕೊಲೆ ನಡೆಯುತ್ತಿದೆ. ಯಡಮೊಗೆ ಎಂಬಲ್ಲಿ ನಡೆದ ಮರ್ಡರ್ ,ನಂತರ ಬ್ರಹ್ಮಾವರದಲ್ಲಿ ವಿಶಾಲ ಗಾಣಿಗ ಎಂಬ ವಿವಾಹಿತೆ ಕೊಲೆ ಮತ್ತೀಗ ಫಿನಾನ್ಶಿಯರ್ ಒಬ್ಬರ ಕೊಲೆ! ಹೌದು... ಹೆಚ್ಚು ಕಡಿಮೆ ಒಂದೂವರೆ ತಿಂಗಳ ಅಂತರದಲ್ಲಿ ಮೂರು ಮೂರು ಹೆಣಗಳು ಉರುಳಿವೆ.
ನಾವೀಗ ಹೇಳಲು ಹೊರಟಿರುವುದು ಜುಲೈ ಮೂವತ್ತರಂದು ನಡೆದ ಫಿನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಬಗ್ಗೆ. ಉಡುಪಿ
ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಡ್ರೀಮ್ಸ್ ಫೈನಾನ್ಸ್ ಮಾಲಕನ ಭೀಕರ ಕೊಲೆಯಾಗಿದೆ. ತನ್ನದೇ ಫೈನಾನ್ಸ್ ಕಚೇರಿಯ ಸೋಫಾದ ಮೇಲೆ ಕುಳಿತ ಸ್ಥಿತಿಯಲ್ಲೇ ಅಜೇಂದ್ರ ಶೆಟ್ಟಿ ಕೊಲೆಯಾಗಿದ್ದಾರೆ.
ಮೃತ ಅಜೇಂದ್ರ ಶೆಟ್ಟಿ, ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಫೈನಾನ್ಸ್ ವ್ಯವಹಾರವೂ ಚೆನ್ನಾಗಿಯೇ ಇತ್ತು. ಡ್ರೀಮ್ ಫೈನಾನ್ಸ್ ಸಂಸ್ಥೆ ಅಜೇಂದ್ರ ಶೆಟ್ಟಿ ಹಾಗೂ ಗೆಳೆಯ ,ಮೊಳಹಳ್ಳಿ ಮೂಲದ ಅನೂಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ ಕಳೆದ ಐದು ವರ್ಷಗಳಿಂದ ನಡೆಯುತ್ತಿತ್ತು.ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಮೊನ್ನೆ ಜುಲೈ ಮೂವತ್ತರಂದು ಅಜೇಂದ್ರ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೆದರಿದ ಮನೆಯವರು, ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಹುಡುಕಾಡುತ್ತಾ ಕಾಳಾವರದ ಫೈನಾನ್ಸ್’ಗೆ ಬಂದಾಗ ಎದುರಿನ ಶೆಟರ್ ಮುಚ್ಚಿದ್ದು ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ಒಳಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲಿ ಕುಳಿತ ಭಂಗಿಯಲ್ಲೇ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಅಜೇಂದ್ರನನ್ನು ಮಾರಕಾಸ್ತ್ರಗಳಿಂದ ಕೊಂದಿದ್ದು ,ಬೇರಾರೂ ಅಲ್ಲ ,ಆತನ ಫೈನಾನ್ಸ್ ಪಾರ್ಟನರ್ ಅನೂಪ್ ಶೆಟ್ಟಿ! ಈತನನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಹೆಡೆಮುರಿ ಕಟ್ಟಿ ಜೈಲಿನ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಕೊಲೆ ನಡೆದ ಮರುದಿನವೇ ಅಜೇಂದ್ರ ಶೆಟ್ಟಿ ಮನೆಯವರು ಅನೂಪ್ ವಿರುದ್ಧ ಕೊಲೆಯ ಆರೋಪ ಮಾಡಿದ್ದರು.ಅವರ ಆರೋಪ ನಿಜವಾಗಿದೆ.ಕೊಲೆಗಾರ ಅನೂಪ್,ಕೊಲೆ ಮಾಡಿ ಅಜೇಂದ್ರ ಶೆಟ್ಟಿಯ ಹೊಚ್ಚ ಹೊಸ ಕಾರಿನಲ್ಲೇ ಪರಾರಿಯಾಗಿದ್ದಾನೆ.ತಕ್ಷಣ ಕಾರ್ಯಪ್ರವೃತ್ತರಾದ ಉಡುಪಿ ಜಿಲ್ಲಾ ಪೊಲೀಸ್ ಕೊಲೆಗಾರನನ್ನು ಹಿಡಿಯಲು ತಂಡ ರಚಿಸಿತ್ತು.ಪ್ರಮುಖ ಜಂಕ್ಷನ್ ಗಳು ಮತ್ತು ಟಾಲ್ ಗೇಟ್ ಗಳ ಸಿಸಿ ಟಿವಿ ಫೂಟೇಜ್ ಮತ್ತಿತರ ಸಾಕ್ಷ್ಯಗಳ ಪರಿಶೀಲನೆ ನಡೆಸಿದ ಪೊಲೀಸರ ತಂಡ ಆರೋಪಿಯನ್ನು ಗೋವಾದ ಕೊಲ್ವಾ ಬೀಚ್ ನಲ್ಲಿ ಬಂಧಿಸಿ ಕರೆತಂದಿದ್ದಾರೆ.
ಅನೂಪ್ ನನಗೆ ಹಣ ಕೊಡಲು ಬಾಕಿ ಇದೆ, ಎಷ್ಟು ಕೇಳಿದರೂ ಕೊಡುತ್ತಿಲ್ಲ ಎಂದು ಮೃತ ಅಜೇಂದ್ರ ತನ್ನ ತಂದೆ ಹತ್ತಿರ ಕೊಲೆ ನಡೆಯುವ ಎರಡು ದಿನದ ಹಿಂದೆ ಹೇಳಿದ್ದನಂತೆ. ಇದೇ ಕಾರಣಕ್ಕೆ ಅನೂಪ್ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಕೊಲೆ ಪೂರ್ವನಿಯೋಜಿತವಾಗಿತ್ತು ಎನ್ನುವುದಕ್ಕೆ ಹರಿತವಾದ ಆಯುಧ ಡ್ರ್ಯಾಗರ್ ಬಳಸಿರುವುದು ಪುಷ್ಟಿ ನೀಡುತ್ತಿದೆ.
ಇದೀಗ ಅನೂಪ್ ಪೊಲೀಸರ ಅತಿಥಿಯಾಗಿದ್ದಾನೆ ,ಈ ಕೊಲೆಯನ್ನು ಅನೂಪ್ ಒಬ್ಬನೇ ಮಾಡಿದನಾ? ಅಥವಾ ಇತರರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಎಂಬ ಕುರಿತು ಪೊಲೀಸರ ತನಿಖೆ ಮುಂದುವರೆದಿದೆ.ಒಟ್ಟಿನಲ್ಲಿ ಕೃಷ್ಣನಗರಿಯಲ್ಲಿ ಹಣ ,ಸಾಂಸಾರಿಕ ಭಿನ್ನಾಭಿಪ್ರಾಯ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಂತಹ ಕ್ಷುಲ್ಲಕ ಕಾರಣಗಳಿಗೆ ಕೊಲೆ ನಡೆಯುತ್ತಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
Kshetra Samachara
02/08/2021 04:14 pm