ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೈನಾನ್ಶಿಯರ್ ಹತ್ಯೆ ಪ್ರಕರಣ: ಆರೋಪಿ ಗೋವಾದಲ್ಲಿ ಬಂಧನ!

ಕುಂದಾಪುರ: ಕುಂದಾಪುರ ತಾಲೂಕಿನ ಕಾಳಾವರ ಎಂಬಲ್ಲಿ ಶುಕ್ರವಾರ ರಾತ್ರಿ ವ್ಯವಹಾರಕ್ಕೆ ಸಂಬಂಧಿಸಿದ ದ್ವೇಷದಲ್ಲಿ ಫೈನಾನ್ಸಿಯರ್ ಒಬ್ಬರನ್ನು ಆತನ ಪಾಲುದಾರನೇ ಕೊಲೆ ಮಾಡಿರುವುದು ಇದೀಗ ಗೊತ್ತಾಗಿದೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಡಾಡಿ ಮತ್ಯಾಡಿ ಗ್ರಾಮದ ಕೂಡಾಲು ನಿವಾಸಿ ಜಗನ್ನಾಥ ಶೆಟ್ಟಿ ಎಂಬವರ ಮಗ ಅಜೇಂದ್ರ ಶೆಟ್ಟಿ (33) ಕೊಲೆಗೀಡಾದವರು. ಪಾಲುದಾರ ಮೊಳಹಳ್ಳಿ ನಿವಾಸಿ ಅನೂಪ್ ಶೆಟ್ಟಿ ಬಂಧಿತ ಆರೋಪಿಯಾಗಿದ್ದಾನೆ.

ಇವರಿಬ್ಬರು ಪಾಲುದಾರಿಕೆಯಲ್ಲಿ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್‌ನಲ್ಲಿ ಫೈನಾನ್ಸ್ ವ್ಯವಹಾರ ನಡೆಸಿಕೊಂಡಿದ್ದರು.ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದರಿಂದ ಈ ಕೊಲೆ ನಡೆಸಲಾಗಿದೆ ಎಂದು ದೂರಲಾಗಿದೆ.

ಪೈನಾನ್ಸ್ ವ್ಯವಹಾರ ಹಾಗೂ ಹಣಕಾಸಿಗೆ ಸಂಬಂಧಿಸಿ ಅಜೇಂದ್ರನೊಂದಿಗೆ ಅನೂಪ್ ತಕರಾರು ತೆಗೆದಿದ್ದ. ಅಲ್ಲದೇ ಅಜೇಂದ್ರ ಇತ್ತೀಚೆಗೆ ಹೊಸದಾಗಿ ಖರೀದಿಸಿದ ಕಾರಿನ ಬಗ್ಗೆ ಕೂಡ ಅನೂಪ್‌ಗೆ ಅಸಮಾಧಾನ ಇತ್ತೆನ್ನಲಾಗಿದೆ. ಇದೇ ವೈಮನಸ್ಸಿನಿಂದ ಅನೂಪ್, ಅಜೇಂದ್ರನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಕೊಲೆ ಮಾಡಿದ ಬಳಿಕ ಅನೂಪ್, ಅಜೇಂದ್ರನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಅಜೇಂದ್ರ ಖರೀದಿಸಿರುವ ಹೊಸ ಹೊಂಡಾ ಸಿಟಿ ಬಿಳಿ ಕಾರನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮೃತರ ಸಹೋದರ ಮಹೇಂದ್ರ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ ಆರೋಪಿಯನ್ನು‌ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/08/2021 07:38 am

Cinque Terre

17.14 K

Cinque Terre

2

ಸಂಬಂಧಿತ ಸುದ್ದಿ