ಉಡುಪಿ: ಉಡುಪಿಯಲ್ಲಿ ಆರ್ ಟಿ ಐ ಕಾರ್ಯಕರ್ತನ ಕೊಲೆಯತ್ನ ಪ್ರಕರಣ ದೇವಸ್ಥಾನದ ಒಳಗೆ ರಕ್ತ ರಂಗೋಲಿಯ ಹೊಸ ಚರಿತ್ರೆ ನಡೆದಿದೆ. ದೇವಾಲಯದ ಆವರಣದೊಳಗೆಯೇ ಮಾರಕಾಯುಧಗಳಿಂದ ಮಾರಣಾಂತಿಕ ಹಲ್ಲೆಯಾಗಿದ್ದು ದೇವಿಯ ಸನ್ನಿಧಾನದಲ್ಲೇ ರಕ್ತ ಹರಿದಿದೆ, ದೇವಿಯ ಕೃಪೆಯಿಂದ ಸಾವಿನ ದವಡೆಯಿಂದ ಪಾರಾದ ಆರ್ ಟಿ ಐ ಕಾರ್ಯಕರ್ತ.
ಅಬ್ಬಬ್ಬಬ್ಬಾ ನ್ಯಾಯದೇವತೆ ಕಣ್ಣುಮುಚ್ಚಿ ಕುಳಿತು ಕೊಂಡಿದ್ದಾರೆ ಅನ್ನುವ ಅಭಿಪ್ರಾಯದೊಂದಿಗೆ ಜನ ರೋಸಿ ಹೋದ ಕ್ಷಣದಲ್ಲಿ ಒಂದಿಷ್ಟು ಹಗರಣಗಳನ್ನು ಬಯಲಿಗೆಳೆಯಲು ಸಾಥ್ ನೀಡಿದ್ದು ಆರ್ ಟಿ ಐ ಮಾಹಿತಿ ಹಕ್ಕು ಕಾಯ್ದೆ,ಹೊಸ ಪ್ರಕರಣಗಳು ಓಪನ್ ಆಗಿ ಕೆಲವೊಂದು ಅಕ್ರಮ ಅನಾಚಾರಗಳು ಬಯಲಿಗೆ ಬರಲು ಇದು ಅನುಕೂಲ ಆಗಿದೆ.
ಹೀಗೆ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಚಿಂತಾಜನಕ ಸ್ಥಿತಿಯಲ್ಲಿ ಮಲಗಿರುವ ವ್ಯಕ್ತಿಯ ಹೆಸರು ಶಂಕರ್ ಶಾಂತಿ. ಈಗ ಇವರ ಬದುಕಿನ ತುಂಬಾ ಅಶಾಂತಿಯೇ ತುಂಬಿದೆ. ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿಯಾಗಿರುವ ಶಂಕರ್, ಆರ್ ಟಿಐ ಕಾರ್ಯಕರ್ತ. ಬೆಳಗ್ಗೆ ಟೀ ಕುಡಿಯಲು ಹೋಗುತ್ತಿದ್ದಾಗ, ಅಡ್ಡಗಟ್ಟಿದ ಸುಮಾರು 15 ಮಂದಿ ಬೊಲೆರೋ ಜೀಪಿನಲ್ಲಿ ಇವರನ್ನು ಎತ್ತಾಕೊಂಡು ಹೋಗಿದ್ದಾರೆ.
ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಕೂಡಿಹಾಕಿದ್ದಾರೆ. ರಾಡ್, ದೊಣ್ಣೆ ಮೂಲಕ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಕೈ ಕಾಲಿನ ಮೂಳೆ ಮುರಿತವಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಂಕರ್, ಆ ಕ್ಷಣ ಕಾಳಿಕಾಂಬೆ ದೇವಿಯೇ ರಕ್ಷಿಸು ಎಂದು ಬೊಬ್ಬಿಟ್ಟಿದ್ದಾರೆ. ಬೊಬ್ಬೆ ಕೇಳಿದ ಗ್ರಾಮದ ಕೆಲವು ಮಂದಿ ಶಂಕರ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಮಡದಿ ಪತಿಯನ್ನ ರಕ್ಷಿಸಲು ಹೆಣಗಾಡಿದ್ದಾರೆ. ಪತ್ನಿಯನ್ನ ಕಂಡು ಆರೋಪಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ.
ಇಷ್ಟಕ್ಕೂ ಈ ಕೊಲೆ ಯತ್ನ ನಡೆದಿದ್ದು ಯಾಕೆ ಗೊತ್ತಾ? ಶಂಕರ್ ಆರ್,ಟಿ,ಐ ಕಾರ್ಯಕರ್ತ, ತನ್ನ ಊರಿನಲ್ಲಿ ಅನ್ಯಾಯದ ವಿರುದ್ದ ಧ್ವನಿ ಎತ್ತಿದ್ದೇ ಈ ಹಲ್ಲೆಗೆ ಕಾರಣ. ಹೌದು, ಬಾರ್ಕೂರಿನ ಐತಿಹಾಸಿಕ ಸ್ಮಾರಕ ಜೈನ ಬಸದಿ ಉಳಿಸಲು ಹೋಗಿದ್ದೇ ಶಂಕರ್ ಪ್ರಾಣಕ್ಕೆ ಕುತ್ತು ತಂದಿದೆ. ಬಾರ್ಕೂರಿನ ಇತಿಹಾಸ ಪ್ರಸಿದ್ದ ಜೈನ ಬಸದಿ ಉಳಿಸಲು ಶಂಕರ್ ಮುಂದಾಗಿದ್ರು. ಬಸದಿಯ ಭೂಮಿಯನ್ನ ಅತಿಕ್ರಮಣ ಮಾಡಲಾಗುತ್ತಿದೆ ಎಂಬ ಅನುಮಾನದಿಂದ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಎಸಿಬಿಗೆ ದೂರು ನೀಡಿ ಜಾಗ ಪರಿಶೀಲನೆ ನಡೆಸಿದಾಗ ಜೈನ ಬಸದಿ ಒಂದು ಭಾಗವನ್ನು ಪ್ರಮುಖ ಆರೋಪಿಯಾಗಿರುವ ಮಂಜಪ್ಪ ಪೂಜಾರಿ ನಕಲಿ ದಾಖಲೆ ಸೃಷ್ಟಿಸಿ ತನ್ನ ಪಟ್ಟಾ ಸ್ಥಳ ಎಂದು ಬದಲಾಯಿಸಿಕೊಂಡಿರುವುದು ಪತ್ತೆಯಾಗಿದೆ. ಇನ್ನೇನು ತನ್ನ ಅಕ್ರಮಕ್ಕೆ ಕುತ್ತು ಬರಲಿದೆ ಎಂದು ಶಂಕರ್ ಮೇಲೆ ಹಲವು ಬಾರಿ ಮಂಜಪ್ಪ ಬೆದರಿಕೆ ಹಾಕಿರುತ್ತಾನೆ. ಇದ್ಯಾವುದಕ್ಕೂ ಜಗ್ಗದಿದ್ದಾಗ ಈ ಕೊಲೆ ಯತ್ನ ಮಾಡಿಸಲಾಗಿದೆ.
ಈ ಕ್ರಿಮಿನಲ್ ಪ್ಲಾನ್ ಗೆ ಸಾಥ್ ಕೊಟ್ಟಿದ್ದು ಒಂದನೇ ದರ್ಜೆ ಪಿಡಬ್ಲುಡಿ ಗುತ್ತಿಗೆದಾರ ಪ್ರವೀಣ್ ಆಚಾರ್ಯ ಹಾಗೂ ಅವನ ತಮ್ಮ ಪ್ರಸಾದ್ ಆಚಾರ್ಯ. ಈ ಮೊದಲು ಪ್ರವೀಣ್ ಆಚಾರ್ಯ ನಡೆಸುತ್ತಿದ್ದ ಕಾಮಗಾರಿಗಳು ಕಳಪೆಯಾಗಿದೆ ಎಂದು ಆರೋಪಿಸಿ ಶಂಕರ್ ಅಡ್ಡಗಾಲು ಇಟ್ಟಿದ್ದರು. ಇದರಿಂದಕೋಪಗೊಂಡಿದ್ದ ಪ್ರವೀಣ್ ಈ ಕೊಲೆ ಯತ್ನ ಪ್ಲಾನ್ ಗೆ ಕೈಜೋಡಿಸ್ತಾನೆ. ಆತನ ಸ್ನೇಹಿತ ಶಾಂತರಾಮ್ ಸೇರಿ 11 ಮಂದಿ ಈ ಹಲ್ಲೆ ನಡೆಸುತ್ತಾರೆ.ಇದೀಗ ಆರೋಪಿಗಳಾಗಿರುವ ಮಂಜಪ್ಪ, ಪ್ರವೀಣ್ ,ಪ್ರಸಾದ್ , ಶಾಂತರಾಮ್ ಸೇರಿ 15ಮಂದಿ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಪರ್ಯಾಸವೆಂದರೆ ಹಲ್ಲೆ ನಡೆಸಿದವರೇ ಹಲ್ಲೆಗೊಳಗಾದವನ ಮೇಲೆ ನಹಲ್ಲೆ ಕೇಸು ದಾಖಲಿಸಿದ್ದಾರೆ.
ಏನೇ ಅನ್ಯಾಯ ನಡೆದ್ರೂ ವಿರೋಧಿಸ್ತಾಯಿದ್ದ ಶಂಕರ್ ಗೆ ಹೋರಾಟವೇ ಮುಳುವಾಗಿದೆ. ಇದೀಗ ಈ ಪ್ರಕರಣ ಎರಡು ವ್ಯಕ್ತಿ ಎರಡು ಗುಂಪುಗಳ ನಡುವಿನ ಹೋರಾಟವಾಗಿರದೆ ಬಿಲ್ಲವ ಸಮುದಾಯವೂ ಎಂಟ್ರಿ ಪಡೆದಿದೆ. ಶಂಕರ್ ಪರ ಬಿಲ್ಲವ ಸಮುದಾಯವೇ ನಿಂತಿರುವುದರಿಂದ ಘಟನೆ ಯಾವ ದಿಕ್ಕಿಗೆ ಹೋಗುತ್ತೆ ಅಂತ ಕಾದುನೋಡಬೇಕಿದೆ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
23/02/2021 08:22 pm