ಉಚ್ಚಿಲ: ಟೈಮಿಂಗ್ ವಿವಾದ; ಹೊಡೆದಾಡಿಕೊಂಡ ಖಾಸಗಿ ಬಸ್ ಚಾಲಕರು
ಮಂಗಳೂರು: ಖಾಸಗಿ ಬಸ್ ಚಾಲಕರಿಬ್ಬರು ಟೈಮಿಂಗ್ ವಿಚಾರದಲ್ಲಿ ಹೊಡೆದಾಡಿಕೊಂಡ ಘಟನೆ ಉಡುಪಿಯ ಉಚ್ಚಿಲ ಪೇಟೆಯಲ್ಲಿ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ವಿಶಾಲ್ ಖಾಸಗಿ ಬಸ್ ಹಾಗೂ ನವದುರ್ಗಾ ಬಸ್ಸಿನ ಚಾಲಕರು ಪರಸ್ಪರ ನಿಂದಿಸಿ, ಹೊಡೆದಾಡಿ ಕೊಂಡವರು. ಪಡುಬಿದ್ರಿಯಲ್ಲಿ ಮುಂದೆ ಹೋಗುತ್ತಿದ್ದ ವಿಶಾಲ್ ಬಸ್ಸನ್ನು ಹಿಂದಿಕ್ಕಿ ನವದುರ್ಗಾ ಮುಂದೆ ಬಂದಿತ್ತು.
ಆಗ ಹಿಂದಿನಿಂದ ಬಂದ ವಿಶಾಲ್ ಬಸ್ಸಿನ ಚಾಲಕ ಸಿದ್ದಿಕ್ ಎಂಬಾತ ಉಚ್ಚಿಲ ಎಂಬಲ್ಲಿ ಬಸ್ಸಿನಿಂದ ಕೆಳಗಿಳಿದು ನವದುರ್ಗಾ ಬಸ್ಸಿನ ಚಾಲಕ ಇಕ್ಬಾಲ್ ಎಂಬವರಿಗೆ ಥಳಿಸಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆಯೇ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಎರಡೂ ಬಸ್ಸನ್ನು ಸೀಝ್ ಮಾಡಿ ಇಬ್ಬರು ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.