ಮುಲ್ಕಿ: ಮುಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕಿಲ್ಪಾಡಿ ಕೆಂಚನಕೆರೆ ತಿರುವಿನಲ್ಲಿ ತ್ಯಾಜ್ಯ ಸ್ವಚ್ಛಗೊಳಿಸುತ್ತಿರುವಾಗ ಕಾರ್ಮಿಕರಿಗೆ ಗರ್ಭಪಾತ ಮಾಡಿದ ಸ್ಥಿತಿಯಲ್ಲಿದ್ದ ಕೊಳೆತ ಭ್ರೂಣ ಪತ್ತೆಯಾಗಿದೆ.
ಕೂಡಲೇ ಕಾರ್ಮಿಕರು ಸ್ಥಳದಲ್ಲಿದ್ದ ಕಿಲ್ಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ್ ಕೆರೆಕಾಡು, ಮಾಜಿ ಸದಸ್ಯ ನಾಗರಾಜ್ ಕುಲಾಲ್ ಮುಖಾಂತರ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲ ವರ್ಷಗಳಿಂದ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆಯಿಂದ ಕುಬೆವೂರು ವರೆಗೆ ದುಷ್ಕರ್ಮಿಗಳು ತ್ಯಾಜ್ಯ ಎಸೆಯುತ್ತಿದ್ದು, ಈ ಬಗ್ಗೆ "ಪಬ್ಲಿಕ್ ನೆಕ್ಸ್ಟ್" ಸಚಿತ್ರ ವರದಿ ಮಾಡಿತ್ತು. ಆಗ ಎಚ್ಚೆತ್ತ ಕಿಲ್ಪಾಡಿ ಪಂಚಾಯಿತಿ ಸಿಬ್ಬಂದಿ, ಸ್ಥಳೀಯ ಸದಸ್ಯ ವಿಕಾಸ್ ಕೆಂಚನಕೆರೆ ನೇತೃತ್ವದಲ್ಲಿ ಭಾನುವಾರ ಸ್ವಚ್ಛತೆ ನಡೆಸುವಾಗ ಮಗುವಿನ ಕೊಳೆತ ಭ್ರೂಣ ಪತ್ತೆಯಾಗಿದೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಕಿಲ್ಪಾಡಿ ಪಂ. ಸದಸ್ಯ ವಿಕಾಸ್ ಕೆಂಚನಕೆರೆ ಮಾತನಾಡಿ, ಈ ಪರಿಸರ ರಸ್ತೆಯಲ್ಲಿ ಹೋಗುವಾಗ ಕೆಲವರು ತ್ಯಾಜ್ಯ ಎಸೆದಿದ್ದು, ಪರಿಸರ ದುರ್ಗಂಧಮಯವಾಗಿದೆ. ದಯವಿಟ್ಟು ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಈ ನಡುವೆ ರಜಾ ದಿನದಂದು ಕರ್ತವ್ಯ ನಿರ್ವಹಿಸಿದ ಕಿಲ್ಪಾಡಿ ಪಂಚಾಯಿತಿಯ ತಾರಾನಾಥ ಶೆಟ್ಟಿಗಾರ್ ಸಹಿತ ಸಿಬ್ಬಂದಿ ಕಾರ್ಯವೈಖರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
Kshetra Samachara
17/01/2021 05:36 pm