ಮಂಗಳೂರು: ದ್ವಿಚಕ್ರ ವಾಹನದಲ್ಲಿ ಆಗಮಿಸಿರುವ ಮೂವರು ಆಗಂತುಕರು ಗೋಣಿ ಚೀಲ ಮುಸುಕು ಹಾಕಿ ಮಕ್ಕಳನ್ನು ಅಪಹರಣ ಮಾಡಲು ಯತ್ನಿಸಿರುವ ಘಟನೆ ನಗರದ ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದ ಮುಂಭಾಗ ನಿನ್ನೆ ನಡೆದಿದೆ. ಆರಂಭದಲ್ಲಿ ಈ ಕೃತ್ಯ ವದಂತಿ, ಮಕ್ಕಳು ಯಾವುದೋ ಕಾರಣಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದು ನಂಬಲಾಗಿತ್ತು.
ಆದರೆ ಇಂದು ಪೊಲೀಸರು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಿದ್ದು, ಅದರಲ್ಲಿ ದಾಖಲಾಗಿರುವ ದೃಶ್ಯ ಘಟನೆಗೆ ಸಾಕ್ಷಿಯಾಗಿದೆ. ಇದೀಗ ಪೊಲೀಸರು ಕೂಡ ಚುರುಕಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಬುಧವಾರ ಸಂಜೆ 7ಗಂಟೆಗೆ ಮೂವರು ಬಾಲಕರು ಕೊಂಚಾಡಿ ಮಹಾಲಸಾ ದೇವಾಲಯದ ಸಮೀಪದಲ್ಲಿರುವ ಮನೆಗೆ ಹೋಗುತ್ತಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು ಆಗಂತುಕರು ಬಾಲಕರ ಬಳಿ ಬೈಕ್ ನಿಲ್ಲಿಸಿ ಗೋಣಿ ಮುಸುಕು ಹಾಕಿ ಬಾಲಕರನ್ನು ಹಿಡಿಯಲು ಯತ್ನಿಸಿದ್ದಾರೆ.
ಈ ಸಂದರ್ಭ ಓರ್ವ ಬಾಲಕ ಧೈರ್ಯದಿಂದ ಅಪಹರಣಕಾರರ ಮೇಲೆ ಕಲ್ಲು, ಮಣ್ಣಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ಅವರು ಕಂಗೆಟ್ಟಿದ್ದು, ಜೊತೆಗೆ ಹಿಂದಿನಿಂದ ಬಾಲಕರ ಮನೆಯವರು ಬರುತ್ತಿರುವುದನ್ನು ನೋಡಿ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್, ಕಂಕನಾಡಿ ಇನ್‌ಸ್ಪೆಕ್ಟರ್ ಅಶೋಕ್ ಹಾಗು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಾಲಕರಿಂದ ಘಟನೆಗೆ ಸಂಬಂಧಿಸಿ ಮಾಹಿತಿ ಪಡೆದಿದ್ದಾರೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಅಳಕೆಯಲ್ಲಿ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಮಕ್ಕಳ ಅಪಹರಣದ ವದಂತಿ ಹಬ್ಬಿ ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮಹಿಳೆಯು ಉತ್ತರ ಭಾರತದವರಾಗಿದ್ದು, ಅಳಕೆ ಪರಿಸರದಲ್ಲಿ ಗುಜರಾತಿ ಮೂಲದವರ ಮನೆಗಳಿಗೆ ತೆರಳಿ ಹಣ ಕೇಳುತ್ತಿದ್ದರು ಎಂದು ತಿಳಿದುಬಂದಿದೆ. ಬುಧವಾರ ಆಟವಾಡುತ್ತಿದ್ದ ಮಕ್ಕಳ ಫೋಟೊ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು.
ಈ ಬಗ್ಗೆ ಯಾರೂ ಲಿಖಿತವಾಗಿ ದೂರು ನೀಡಿದ ಕಾರಣ ಬಂದರು ಠಾಣೆ ಪೊಲೀಸರು ಮಹಿಳೆಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.
Kshetra Samachara
14/01/2021 10:28 pm