ಮೂಡುಬಿದಿರೆ: ತನ್ನ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತೋಟದಲ್ಲಿ ನೀರು ಬಿಡುತ್ತಿದ್ದಾಗ ತಾಕೋಡೆಯ ಜೆರೋಮ್ ಡಿ. ಕ್ರಾಸ್ತಾ, ಪತ್ನಿ ಶಾಂತಿ ಕ್ರಾಸ್ತ ಮತ್ತಿತರರು ತನ್ನ ಮತ್ತು ತನ್ನ ಚಿಕ್ಕಮ್ಮ ಕುಸುಮಾ ಅವರ ಮೇಲೆ ಹಲ್ಲೆ ನಡೆಸಿದ್ದು ತಮಗೆಲ್ಲರಿಗೂ ಪ್ರಾಣ ಭೀತಿ ಇದೆ ಎಂದು ತಾಕೋಡೆಯ ಕೂಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಜೆರೋಮ್ ಡಿ. ಕ್ರಾಸ್ತಾ, ಶಾಂತಿ ಕ್ರಾಸ್ತಾ , ಜೆಸ್ಟಿನ್ ಕ್ರಾಸ್ತಾ ಹಾಗೂ ದಿನೇಶ್ ವಿರುದ್ಧ ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೂಸ ಪೂಜಾರಿ ಅವರು, ತಾನು ಜೆರಾಲ್ಡ್ ಕ್ರಾಸ್ತಾ ಅವರಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದು ಹಾಗೆ ಹೋಗದಂತೆ ಜೆರಾಲ್ಡ್ ಅವರ ದಾಯಾದಿ ಜೆರೋಮ್ ಕ್ರಾಸ್ತ ಸದಾ ಒತ್ತಡ ಹೇರುತ್ತಿದ್ದರು.
ಹಾಗಿದ್ದರೂ ತಾನು ಅಲ್ಲಿ ಕೆಲಸ ಬಿಡದಿರುವುದರಿಂದ ಸಿಟ್ಟುಗೊಂಡ ಅವರು ಡಿ. 30ರಂದು ಅವಾಚ್ಯ ಪದಗಳಿಂದ ಬೈದು, ಮರದ ಸೋಂಟೆಯಿಂದ ತನ್ನ ಹಾಗೂ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ತನ್ನ ಸಂಬಂಧಿಕರಾದ ಕುಸುಮಾ ಮೇಲೆಯೂ ಶಾಂತಿ ಕ್ರಾಸ್ತಾ ಗಂಭೀರ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡ ತಾನು ಹಾಗೂ ಕುಸುಮಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಜೀವ ಬೆದರಿಕೆ ಇರುವ ತನಗೆ ಮತ್ತು ತನ್ನ ಸಂಬಂಧಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಕುಸುಮಾ ಹಾಗೂ ಕೂಸ ಪೂಜಾರಿ ಅವರು ಆರೋಪಿಗಳು ತಮ್ಮ ಮೇಲೆ ನಡೆಸಿದ ಹಲ್ಲೆಯಿಂದಾದ ಗಾಯದ ಗುರುತು ಪತ್ರಕರ್ತರೆದುರು ತೋರಿಸಿದರು. ಸುಗಂಧಿ, ರತ್ನಾವತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
03/01/2021 09:59 am