ಉಡುಪಿ : ಅಪ್ರಾಪ್ತ ವಯಸ್ಕ ಹುಡುಗಿಯ ವಿವಾಹ ನಡೆಯುತ್ತಿರುವ ಕುರಿತು ಬಂದ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿದ ಘಟನೆ ಕುಂದಾಪುರ ಬಳಿಯ ತ್ರಾಸಿ ಬಳಿ ನಡೆದಿದೆ.
ತ್ರಾಸಿ ಮಹಾಗಣಪತಿ ಸಭಾಭವನದಲ್ಲಿ ತಲ್ಲೂರು ಗುಡ್ಡೆಯಂಗಡಿಯ 17 ವರ್ಷದ ಬಾಲಕಿಗೆ 28 ವರ್ಷದ ಹುಡುಗನೊಂದಿಗೆ ಮದುವೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡು 200 ಕ್ಕೂ ಹೆಚ್ಚು ಮಂದಿ ಮದುವೆ ಹಾಲ್ ನಲ್ಲಿ ಸೇರಿದ್ದರು.
ಈ ಕುರಿತು ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಪೊಲೀಸ್ ಇಲಾಖೆ ಗಂಗೊಳ್ಳಿ, ಗ್ರಾಮ ಪಂಚಾಯತ್ ತ್ರಾಸಿ ಇಲ್ಲಿನ ಅಧಿಕಾರಿಗಳ ತಂಡ ಮದುವೆ ಹಾಲ್ ಗೆ ಹಠಾತ್ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆದಿದ್ದಾರೆ. ಬಳಿಕ ಎರಡು ಕುಟುಂಬದ ಕಡೆಯವರಿಗೂ ಬಾಲ್ಯವಿಹಾಹ ನಿಷೇಧ ಮತ್ತು ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಯಿತು.
ಕುಟುಂಬಿಕರು, ಹಾಲ್ ಮಾಲಿಕರು ಮತ್ತು ಪುರೋಹಿತರಿಂದ ಮಾಹಿತಿ ಪಡೆದು, ಮದುವೆಗೆ ಬಂದವರೆನ್ನೆಲ್ಲಾ ವಾಪಾಸು ಕಳುಹಿಸಿ ಕೊಡಲಾಯಿತು .ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ, ಮತ್ತಿತರರು ಭಾಗಿಯಾಗಿದ್ದರು.
Kshetra Samachara
31/12/2020 05:21 pm