ಮಂಗಳೂರು: ಗುರುವಾರ ನಗರದ ಸಂಚಾರಿ ಪೊಲೀಸರು ಕಾರಿನಲ್ಲಿದ್ದ 9 ವರ್ಷದ ಬಾಲಕನ ಸಹಿತ ಕಾರನ್ನು ಟೋಯಿಂಗ್ ಮಾಡಿ ಠಾಣೆಗೆ ಎಳೆದೊಯ್ದಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಮಿಜಾರಿನ ದಿವ್ಯಾ ಅವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದಿದ್ದರು. ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ತೆರಳಿದ್ದರು. ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ, ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರಖ್ಯಾತ್ ಕಾರಿನಲ್ಲೇ ಇದ್ದರು. ದಿವ್ಯಾ ಅವರು ಮೊಬೈಲನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದನ್ನು ಗಮನಿಸಿದ ಚಾಲಕ ಅದನ್ನು ದಿವ್ಯಾರಿಗೆ ನೀಡಲೆಂದು ತೆರಳಿದ್ದಾಗ ಪೊಲೀಸರು ಮಗುವಿನ ಸಹಿತ ಕ್ಷಣಮಾತ್ರದಲ್ಲಿ ಕಾರನ್ನು ಟೋಯಿಂಗ್ ಮಾಡಿದ್ದರು.
ನಂತರ ಕಾರು ಹಾಗೂ ಬಾಲಕ ಕಾಣದಿರುವ ಕಾರಣ ಗಾಬರಿಯಾದ ದಿವ್ಯಾ ಸುತ್ತಲೂ ಹುಡುಕಾಡಿದ್ದಾರೆ. ಬಳಿಕ ಸ್ಥಳದಲ್ಲೇ ಇದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕದ್ರಿ ಸಂಚಾರಿ ಪೊಲೀಸರು ಕಾರನ್ನು ಟೋಯಿಂಗ್ ಮಾಡಿಕೊಂಡು ಹೋಗಿರುವುದು ಕಾಣಿಸಿದೆ.
ನಾವು ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿರಲಿಲ್ಲ. ಅಲ್ಲಿ ಯಾವುದೇ ರಸ್ತೆಯೂ ಇರಲಿಲ್ಲ. ಆದರೂ ಪೊಲೀಸರು ಕಾರು ಟೋಯಿಂಗ್ ಮಾಡಿಕೊಂಡು ಹೋಗಿದ್ದಾರೆ ಎಂದು ದಿವ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
26/12/2020 07:06 pm