ಬಿಲ್ಕಿಸ್ ಬಾನುವಿನ ಅತ್ಯಾಚಾರ ಎಸಗಿದ ಹಾಗೂ ಅವರ ಕುಟಂಬದ ಸದಸ್ಯರನ್ನು ಸಾಮೂಹಿಕವಾಗಿ ಹತ್ಯೆ ನಡೆಸಿ ಶಿಕ್ಷೆಗೊಳಗಾಗಿದ್ದ ಹನ್ನೊಂದು ಮಂದಿಯನ್ನು ಗುಜರಾತ್ ಸರಕಾರವು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದ ಕ್ರಮ ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು ಮಂಗಳೂರು ನಗರದ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಿತು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಸಹೋದಯ, ಬಿಲ್ಲವ ಮಹಿಳಾ ಮಂಡಲ, ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ, ಫಾರ್ವರ್ಡ್ ಟ್ರಸ್ಟ್, ಡಿಸಿಸಿ ಡಬ್ಲ್ಯು, ಯುವ ಮುನ್ನಡೆ, ಸಂಚಲನ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ, ಇಂಡಿಯನ್ ಕಮ್ಯುನಿಸ್ಟ್ ಆಕ್ಟಿವಿಸ್ಟ್ ನೆಟ್ವರ್ಕ್, ನ್ಯಾಶನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ, ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ, ಕರಾವಳಿ ಮಹಿಳಾ ಹಕ್ಕುಗಳ ರಕ್ಷಣಾ ವೇದಿಕೆ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ, ಜೀವನ್ ಧಾರಾ ಮತ್ತು ತರಿಕಿಟ ಕಲಾ ಕಮ್ಮಟ ಸಂಘಟನೆಗಳು, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಕಪ್ಪು ಉಡುಪು ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಲ್ಕಿಸ್ ಬಾನುಗೆ ನ್ಯಾಯ ಸಲ್ಲಿಸಲು ಬಿಡುಗಡೆಯಾದ 11 ಮಂದಿ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಬೇಕು, ಮುರುಘಾ ಮಠದ ಶಿವಮೂರ್ತಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರಿಗೆ ಕಾನೂನು ರೀತಿಯಲ್ಲಿ ಸಿಗಬೇಕಾದ ಪರಿಹಾರಗಳನ್ನು ತಕ್ಷಣ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Kshetra Samachara
14/09/2022 06:47 pm