ಸುಳ್ಯ:ಎನ್.ಐ.ಎ. ಜತೆ ಸೇರಿಯೇ ತನಿಖೆ; ಶೀಘ್ರವೇ ಹಂತಕರ ಬಂಧನ: ಸಭೆಯ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ
ಸುಳ್ಯ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುರುತು ಪತ್ತೆಯಾದ ಮೂವರು ಹಂತಕರ ಬಂಧನ, ಮುಂದಿನ ತನಿಖೆ, ಆರೋಪಿಗಳ ಆಸ್ತಿ ಮುಟ್ಟುಗೋಲು ಮತ್ತಿತರ ವಿಚಾರಗಳ ಕುರಿತು ಚರ್ಚಿಸಲು ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆಯು ಇಂದು ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ.ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಹೃಷಿಕೇಶ್ ಸೋನಾವಣೆ, ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಪುತ್ತೂರು ಡಿವೈಎಸ್ ಪಿ ಡಾ. ಗಾನ ಪಿ. ಕುಮಾರ್ ಅಲ್ಲದೆ ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಗುರುತು ಪತ್ತೆಯಾದ ಪ್ರಮುಖ ಹಂತಕರು ತಲೆಮರೆಸಿಕೊಂಡಿದ್ದು, ಆಗಾಗ ತಮ್ಮಅಡಗುತಾಣಗಳನ್ನು ಬದಲಾಯಿಸುತ್ತಿರುವುದರಿಂದ ಎಲ್ಲ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಸದಾ ಜಾಗೃತರಾಗಿರಬೇಕೆಂದು ಸಭೆಯಲ್ಲಿ ಸೂಚಿಸಲಾಯಿತೆಂದು ತಿಳಿದು ಬಂದಿದೆ. ಅಲ್ಲದೆ ಮುಂದಿನ ತನಿಖೆಯ ಕುರಿತಂತೆಯೂ ಚರ್ಚಿಸಲಾಯಿತೆಂದು ತಿಳಿದುಬಂದಿದೆ.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಎನ್.ಐ.ಎ. ಅಧಿಕಾರಿಗಳೂ ನಮ್ಮ ಜೊತೆಗಿದ್ದಾರೆ. ಶೀಘ್ರದಲ್ಲೇ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದರು.
ಪುತ್ತೂರು ,ಸುಳ್ಯ,ಬೆಳ್ಳಾರೆಯಲ್ಲಿ ಬೇರೆಯದ್ದೇ ಪರಿಸ್ಥಿತಿ ಇದೆ. ಇದು ಸೂಕ್ಷ್ಮ ಪ್ರದೇಶವಾಗಿದೆ. ಅಟ್ಯಾಕ್ ಮಾಡಿದವರಿಗಾಗಿ ಹುಡುಕುತ್ತಿದ್ದೇವೆ.ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇವೆ. ಬೇಗನೆ ಪತ್ತೆ ಮಾಡುತ್ತಾರೆ.
ಪೊಲೀಸ್ ಇನ್ನೂ ಜಾಗೃತವಾಗಬೇಕು.ಇಲ್ಲಿ ಅರಣ್ಯ ಪ್ರದೇಶಗಳು ಜಾಸ್ತಿ, ಕೇರಳ ಹತ್ತಿರ ಇದೆ. ಆದರಿಂದ ಅಧಿಕಾರಿಗಳು ಹೆಚ್ಚು ಕೆಲಸಮಾಡಬೇಕಾಗುತ್ತದೆ ಅವರು ಹೇಳಿದರು.
PublicNext
10/08/2022 10:56 pm