ಮಂಗಳೂರು: ಸಾಮಾನ್ಯವಾಗಿ ಕೈದಿಯೋರ್ವನನ್ನು ಬಿಡುಗಡೆ ಮಾಡಿ ಎಂದು ಮನೆಮಂದಿ ರಾಷ್ಟ್ರಪತಿಗಳವರೆಗೆ ಹೋಗಿ ಮನವಿ ಮಾಡೋದನ್ನು ನಾವು ನೋಡುತ್ತೇವೆ. ಆದರೆ ಈ ರೀತಿ ಗುಂಪು ಗುಂಪುಗಾಗಿ ಪೊಲೀಸ್ ಕಮಿಷನರ್ ಕಚೇರಿಗೆ ದಾಂಗುಡಿಯಿಟ್ಟ ಕುಟುಂಬಸ್ಥರು ತಮ್ಮ ಕುಟುಂಬದ ವ್ಯಕ್ತಿಯನ್ನು ಬಿಡುಗಡೆ ಮಾಡಿ ಎಂದು ಕೇಳಿಲ್ಲ. ಬದಲಾಗಿ ನಾಲ್ಕು ಕೊಲೆ ಮಾಡಿರುವ ಆ ಕೊಲೆಗಡುಕನನ್ನು ಜೈಲಿನಿಂದ ಬಿಡುಗಡೆ ಮಾಡದಿರಿ ಎಂದು ಪೂರ್ಣ ಕುಟುಂಬವೇ ಬಂದು ಮನವಿ ಮಾಡಿರುವ ಘಟನೆಗೆ ಇಂದು ಮಂಗಳೂರಿನಲ್ಲಿ ನಡೆದಿದೆ.
ಹೌದು... ನಗರದ ವಾಮಂಜೂರಿನ ಒಂದೇ ಕುಟುಂಬದ ನಾಲ್ವರನ್ನು 1994ರಲ್ಲಿ ಹತ್ಯೆ ಮಾಡಿದ ಕೊಲೆಪಾತಕಿ ಪ್ರವೀಣ್ ಕುಮಾರ್ ಗೆ ಸ್ವಾತಂತ್ರ್ಯದ ಅಮೃತೋತ್ಸವದ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಸರಕಾರ ಬಿಡುಗಡೆ ಭಾಗ್ಯ ಕರುಣಿಸಿತ್ತು. ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿರುವ ವಿಚಾರ ಆತನ ಕುಟುಂಬ ವಲಯದಲ್ಲಿ ಭಾರೀ ಆತಂಕ ಮೂಡಿಸಿದೆ. ಆದ್ದರಿಂದ ಹತ್ಯೆಯಾದವರ ಕುಟುಂಬದ ಸುಮಾರು 50ರಷ್ಟು ಮಂದಿ ಇಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರಿಗೆ ಆತನ ಬಿಡುಗಡೆ ಮಾಡಬಾರದೆಂದು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಸ್ವತಃ ಕೊಲೆಪಾತಕಿ ಪ್ರವೀಣ್ ಕುಮಾರ್ ಪತ್ನಿ ಅನಸೂಯಾ ಆತನನ್ನು ಬಿಡುಗಡೆ ಮಾಡಬಾರದೆಂದು ಕಮಿಷನರ್ ಅವರಿಗೆ ಮನವಿ ಮಾಡಿದ್ದಾರೆ.
ಹಂತಕ ಪ್ರವೀಣ್ ಕುಮಾರ್ ಮಾಡಿರುವ ಕೃತ್ಯದಿಂದ ಆತನ ಪೂರ್ತಿ ಕುಟುಂಬವೇ ಆತನ ವಿರುದ್ಧ ತಿರುಗಿ ಬಿದ್ದಿದೆ. ಈ ಘಟನೆ ಅಂದು ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು.
ಇದೀಗ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಮಾಡಬೇಡಿ ಎಂದು ಸ್ವತಃ ಆತನ ಕುಟುಂಬಸ್ಥರೇ ಮನವಿ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ.
Kshetra Samachara
09/08/2022 10:29 pm