ಮಂಗಳೂರು: ಹಿರಿಯ ದಲಿತ ಮುಖಂಡ ಪಿ.ಡೀಕಯ್ಯನವರ ಸಾವಿನ ಸುತ್ತು ಅನುಮಾನದ ಹುತ್ತವೊಂದು ಬೆಳೆದಿದೆ. ಅವರ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನಲೆಯಲ್ಲಿ ಬೆಳ್ತಂಗಡಿಯ ಪದ್ಮುಂಜದಲ್ಲಿ ಧಪನ ಮಾಡಲಾಗಿರುವ ಡೀಕಯ್ಯರ ಮೃತದೇಹವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ದಲಿತ ಮುಖಂಡ, ಬಹುಜನ ಚಳುವಳಿಯ ಹಿರಿಯ ಮುಂದಾಳು ಪಿ.ಡೀಕಯ್ಯ ಅವರು ಜುಲೈ 8ರಂದು ತೀವ್ರ ಮೆದುಳು ರಕ್ತಸ್ರಾವದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ಇದೀಗ ಅವರ ಕುಟುಂಬಸ್ಥರು ಇದು ಸಹಜ ಸಾವಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಮ್ ಸಮಕ್ಷಮದಲ್ಲಿ ಇಂದು ಡೀಕಯ್ಯರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪತ್ನಿ ಪದ್ಮುಂಜದ ಕುಟುಂಬದ ಮನೆಯಲ್ಲಿ ಇದ್ದ ಸಂದರ್ಭ ಡೀಕಯ್ಯರವರು ಗರ್ಡಾಡಿಯ ತಮ್ಮ ಮನೆಯಲ್ಲಿ ಅಸ್ವಸ್ಥರಾಗಿದ್ದರು. ಬೆಳಗ್ಗೆ ಮನೆಯವರು ಬಂದಾಗ ಬಾಗಿಲು ತೆಗೆಯದಿರುವ ಹಿನ್ನೆಲೆಯಲ್ಲಿ ಮನೆಯ ಬಾಗಿಲನ್ನು ಒಡೆದು ಮನೆಯೊಳಗೆ ಹೋದಾಗ ಅವರು ಅಡುಗೆ ಮನೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ತಕ್ಷಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಇದೀಗ ಅವರ ಅನುಮಾನದದ ದೂರು ನೀಡಿದ ಬಳಿಕ ಬೆಳ್ತಂಗಡಿ ಪೊಲೀಸರು ಒಟ್ಟು ಘಟನೆಯ ತನಿಖೆ ಆರಂಭಿಸಿದ್ದಾರೆ. ನಿಯಮದಂತೆ ಮಹಜರು ನಡೆಸಿ, ಬಳಿಕ ದಫನ್ ಮಾಡಲಾದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Kshetra Samachara
18/07/2022 10:44 pm