ಮಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ರಾಜ್ಯದ ಗಮನಸೆಳೆದ ಪ್ರಮುಖ ಆರೋಪಿಯಾಗಿ ಬಂಧಿತನಾಗಿದ್ದ, ಮಂಗಳೂರಿನ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯನ್ನು ಇಂದು ಪರೇಡ್ ವೇಳೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಚಳಿ ಬಿಡಿಸಿದ್ದಾರೆ.
ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ರೌಡಿ ಪರೇಡ್ ನಲ್ಲಿ ಡ್ರಗ್ಸ್ ಪ್ರಕರಣದ ಆರೋಪಿಯಾಗಿದ್ದ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ಅಂಗಿ ಬಿಚ್ಚಿಸಿ ಆತನ ಕತ್ತಿನಲ್ಲಿದ್ದ ಹಾರಗಳ ಬಗ್ಗೆ ಪ್ರಶ್ನಿಸಿದ್ದಾರೆ. ಆತನ ಎದೆಯ ಮೇಲಿದ್ದ ಟ್ಯಾಟೂ ನೋಡಿ 'ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ' ಎಂದು ಪ್ರಶ್ನಿಸಿದ್ದಾರೆ.
ತಾಯಿಯ ಟ್ಯಾಟೂ ಹಾಕಿರುವೆ ಎಂದ ಕಿಶೋರ್ ಅಮನ್ ಶೆಟ್ಟಿಗೆ 'ಮಾಡೋದೆಲ್ಲಾ ಮಾಡಿ ತಾಯಿಯ ಟ್ಯಾಟೂ ಯಾಕೆ ಹಾಕಿಸಿಕೊಂಡಿದ್ದೀಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ. ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದಿ. ನೀನೇ ತಿನ್ನೋದಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ?' ಎಂದು ಜೋರಾಗಿ ಗದರಿಸಿದ್ದಾರೆ.
ಅಲ್ಲದೇ ಆತ ಉದ್ದ ಕೂದಲು ಬಿಟ್ಟಿದ್ದನ್ನು, ಕಣ್ಣು-ಕಿವಿ-ಬಾಯಿ ಬಳಿ ಚುಚ್ಚಿಸಿರೋದನ್ನು ಪ್ರಶ್ನಿಸಿದ ಕಮೀಷನರ್ ಗೆ ಡ್ಯಾನ್ಸ್ ಗಾಗಿ ಈ ರೀತಿ ಮಾಡಿಕೊಂಡಿದ್ದೇನೆ ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿದ್ದಾನೆ. ಇದೀಗ ಕಿಶೋರ್ ಅಮನ್ ಶೆಟ್ಟಿ ಮಂಗಳೂರಿನ ಖಾಸಗಿ ಟಿವಿ ವಾಹಿನಿಯೊಂದರ ಡ್ಯಾನ್ಸ್ ಸ್ಪರ್ಧೆಯ ಜಡ್ಜ್ ಆಗಿದ್ದಾನೆ.
PublicNext
06/07/2022 05:16 pm