ಮಂಗಳೂರು: ನಗರದ ಸುರತ್ಕಲ್ ಪ್ರದೇಶದ ಕಾಟಿಪಳ್ಳದಲ್ಲಿ ಮದರಸದಿಂದ ಮನೆಗೆ ಮರಳುತ್ತಿದ್ದ ಬಾಲಕನ ಮೇಲೆ ಹಲ್ಲೆ ನಡೆದಿತ್ತು ಎನ್ನಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ.
ಕಾಟಿಪಳ್ಳದ ಆರನೇ ಬ್ಲಾಕ್ ನಲ್ಲಿರುವ ತೌಯಿಬಾ ಮಸೀದಿಯ ಆರನೇ ತರಗತಿಯ ವಿದ್ಯಾರ್ಥಿ ಜೂನ್ 27ರಂದು ಮದರಸದಿಂದ ಮನೆಗೆ ಮರಳುತ್ತಿದ್ದ ವೇಳೆ ದ್ವಿಚಕ್ರದಲ್ಲಿ ಬಂದಿರುವ ಆಗಂತುಕರಿಬ್ಬರು ತನ್ನನ್ನು ಎಳೆದಾಡಿ ಅಂಗಿ ಹರಿದು ಹಲ್ಲೆ ನಡೆಸಿದ್ದರು ಎಂದು ಆರೋಪ ಮಾಡಿದ್ದ. ಅದರಲ್ಲೂ ಭಿನ್ನ ಕೋಮಿನ ವ್ಯಕ್ತಿಗಳಾಗಿದ್ದರು ಎಂದು ಹೇಳಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಆ ಬಾಲಕ ಕಟ್ಟುಕತೆ ಸೃಷ್ಟಿಸಿರೋದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ತನಿಖೆ ನಡೆಸಿದಾಗ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ವಿಚಾರಣೆ ನಡೆಸಿದಾಗ ಆತ ಈ ಕಟ್ಟುಕತೆ ಕಟ್ಟಿರುವುದು ಬೆಳಕಿಗೆ ಬಂದಿದೆ.
ಆತ ಕಲಿಯುವುದರಲ್ಲಿ ಹಿಂದಿದ್ದ. ಶಾಲೆಯಲ್ಲಿ ಸ್ನೇಹಿತರಿರಲಿಲ್ಲ, ಕಪ್ಪಗಿರುವುದು, ಮನೆಯಲ್ಲಿ ಬಡತನ, ಸೈಕಲ್ ಇಲ್ಲದೆ ಬರುವುದಿಲ್ಲವೆಂದು ಸ್ನೇಹಿತರೊಂದಿಗೆ ಚಾಲೆಂಜ್ ಮಾಡಿರುವ ಕಾರಣದಿಂದ ಈ ರೀತಿ ಮಾಡಿರುವುದಾಗಿ ಆತ ತಿಳಿಸಿದ್ದಾನೆ. ಅಲ್ಲದೆ ಪೆನ್ ನಿಂದ ಶರ್ಟ್ ಹರಿದು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಕತೆ ಸೃಷ್ಟಿಸಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಪರಿಸರದ ಮಸೀದಿ ಸಮಿತಿ ಆತಂಕ ವ್ಯಕ್ತಪಡಿಸಿತ್ತು. ಕೋಮು ದ್ವೇಷಕ್ಕೆ ಕಾರಣವಾಗುವಂತಹ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿತ್ತು. ಆದರೆ, ಇದೀಗ ಪ್ರಕರಣ ಕಟ್ಟುಕತೆ ಎಂಬಲ್ಲಿಗೆ ಸುಖಾಂತ್ಯಗೊಂಡಿದೆ. ಬಾಲಕನಿಗೆ ಚೈಲ್ಡ್ ವೆಲ್ಫೇರ್ ಕಮಿಟಿ ಹಾಗೂ ವೈದ್ಯರ ಸಲಹೆ ಪಡೆಯಲು ತಿಳಿಸಲಾಗಿದೆ.
PublicNext
30/06/2022 08:48 pm