ಮಂಗಳೂರು: ಅಗ್ನಿಪಥ್ ಹೋರಾಟಗಾರರಲ್ಲಿ ಕೆಲವರು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ರೈಲಿಗೆ ಬೆಂಕಿ ಹಚ್ಚುವವರು ಸೇನೆಗೆ ಸೇರುವ ಅಗತ್ಯವಿಲ್ಲ. ರೈಲಿಗೆ ಬೆಂಕಿ ಹಚ್ಚುವವರು ಸೈನಿಕನಲ್ಲ, ದೇಶದ ಆಸ್ತಿ ಹಾಳು ಮಾಡುವವನು ಎಂದು ನಿವೃತ್ತ ಸೈನಿಕ ಕರ್ನಲ್ ಶರತ್ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಉತ್ತಮ ಯೋಜನೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲೇ ಈ ಯೋಜನೆ ಜಾರಿಗೆ ಅಂದಿನ ಸರ್ಕಾರ ಯೋಚನೆ ಮಾಡಿತ್ತು. ಈ ಯುದ್ಧದ ಸಂದರ್ಭ 17000 ಅಡಿ ಎತ್ತರದ ಪರ್ವತವನ್ನು ಹತ್ತಿ ಯುದ್ಧ ಮಾಡಲು 35-40 ವರ್ಷದ ಸೈನಿಕರಿಗೆ ಕಷ್ಟಕರವಾಗಿತ್ತು. ಆದ್ದರಿಂದ ಯುದ್ಧ ಗೆದ್ದರೂ ನೂರಾರು ಸೈನಿಕರು ಸಾಯಲು ವಯಸ್ಸಿನ ಹೆಚ್ಚಳವೇ ಕಾರಣವಾಗಿತ್ತು. ಹೀಗಾಗಿ ಸೈನಿಕರ ವಯೋಮಿತಿಯನ್ನು ಇಳಿಸಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ಮೋದಿ ಸರ್ಕಾರ ಈ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಕರ್ನಲ್ ಶರತ್ ಭಂಡಾರಿ ಹೇಳಿದರು.
ಸೇನಾ ವಯೋಮಿತಿಯನ್ನು 26 ವರ್ಷದೊಳಗೆ ತರಬೇಕೆಂಬುದು ಸರ್ಕಾರದ ಚಿಂತನೆಯಾಗಿದೆ. ಇನ್ನು ಮುಂದೆ ಅಗ್ನಿಪಥ್ ಮೂಲಕವೇ ಸೇನಾ ನೇಮಕಾತಿ ನಡೆಯುತ್ತದೆ. ಈಗಿರುವ ನೇಮಕಾತಿಗೂ ಅಗ್ನಿಪಥ್ ಗೂ ಯಾವುದೇ ವ್ಯತ್ಯಾಸವಿಲ್ಲ. ಈಗ ಸೇರ್ಪಡೆಗೊಳ್ಳುವವರಿಗೆ 4 ವರ್ಷಗಳ ಬಳಿಕ ಪಿಂಚಣಿ, ಆರೋಗ್ಯ ಕವಚ ಸೌಲಭ್ಯ, ಸೇವಾವಧಿಯ ಭತ್ಯೆಯೂ ಇಲ್ಲವೆಂಬುದು ಆಕಾಂಕ್ಷಿಗಳ ವಿರೋಧಕ್ಕೆ ಕಾರಣವಾಗಿರಬಹುದು. ಅಗ್ನಿಪಥ್ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ಸೇನೆಯೂ ಎಡವಿದೆ. ಅಗ್ನಿಪಥ್ ನಿಂದ 4 ವರ್ಷಗಳಲ್ಲಿ ಉತ್ತಮ ಸೈನಿಕನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಉತ್ತಮ ಸೈನಿಕನೋರ್ವನು ಸೃಷ್ಟಿಯಾಗಲು ಕನಿಷ್ಠ 6 ವರ್ಷಗಳು ಬೇಕು. ಒಂದು ವರ್ಷದಲ್ಲಿ ಸೈನಿಕರನ್ನು ಸಂಪೂರ್ಣ ತರಬೇತಿಗೊಳಿಸಲು ಸಾಧ್ಯವಿಲ್ಲ ಎಂದು ಕರ್ನಲ್ ಶರತ್ ಭಂಡಾರಿ ಹೇಳಿದ್ದಾರೆ.
Kshetra Samachara
24/06/2022 09:38 pm