ವರದಿ: ರಹೀಂ ಉಜಿರೆ
ಬೈಂದೂರು: ಇದು ಸಿನೆಮಾವನ್ನು ಹೋಲುವ ಕಥೆ. ಮುಂಬೈಯಿಂದ ಚಿನ್ನದ ವ್ಯಾಪಾರ ಮಾಡುವ ವ್ಯಕ್ತಿಯನ್ನು ಹಿಂಬಾಲಿಸಿದ ದರೋಡೆಕೋರರ ತಂಡ ಬಸ್‌ನಲ್ಲಿದ್ದ ಬರೋಬ್ಬರಿ 18 ಲಕ್ಷ ಮೌಲ್ಯದ ಅರ್ಧ ಕೆ.ಜಿ ಚಿನ್ನಾಭರಣವನ್ನು ರಾಬರಿ ಮಾಡಿತ್ತು. ಜುವೆಲ್ಲರಿಗಳಿಗೆ ಚಿನ್ನ ಸಾಗಿಸುವ ಮತ್ತು ಬ್ಯಾಂಕ್ ಗಳಿಂದ ಭಾರಿ ಹಣ ಡ್ರಾ ಮಾಡುವವರೇ ಈ ತಂಡದ ಟಾರ್ಗೆಟ್. ಆದರೆ ಉಡುಪಿ ಪೊಲೀಸರು ಅಷ್ಟೇ ಚಾಣಾಕ್ಷತನದಿಂದ ಈ ರಾಬರಿ ತಂಡದ ಹೆಡೆಮುರಿ ಕಟ್ಟಿದ್ದಾರೆ.
ಮುಂಬೈ ಮೂಲದ ಈಶ್ವರ್ ಜೂ.16 ರಂದು ಚಿನ್ನ ಖರೀದಿಸಿ ವ್ಯಾಪಾರ ಮಡುವ ಸಲುವಾಗಿ ಮಂಗಳೂರಿಗೆ ಬಸ್ ನಲ್ಲಿ ಬರುತ್ತಾರೆ. ಜಿಲ್ಲೆಯ ಗಡಿ ಶಿರೂರಿನಲ್ಲಿ ಅವರಿದ್ದ ಬಸ್ ನಿಲ್ಲುತ್ತೆ. ಪ್ರಯಾಣಿಕರು ಟೀ ಕುಡಿಯಲು ಇಳಿಯುತ್ತಾರೆ. ಈಶ್ವರ್ ಕೂಡ ಕೆಳಗಿಳಿಯುತ್ತಾರೆ. ಮತ್ತೆ ಬಸ್‌ನೊಳಗೆ ಬಂದು ಕೂತಾಗ, ಅವರ ಚಿನ್ನಾಭರಣ ಇದ್ದ ಸೂಟ್ ಕೇಸ್ ನಾಪತ್ತೆ! ಗಾಬರಿಯಾದ ಅವರು ಪೊಲೀಸರಿಗೆ ದೂರು ಕೊಡುತ್ತಾರೆ!
ಈ ಖದೀಮ ದರೋಡೆಕೋರರು ಶಿರೂರಿನಲ್ಲಿ ಬಸ್ ನಿಂತಿದ್ದಾಗ ಚಿನ್ನಾಭರಣದ ಬ್ಯಾಗ್ ದೋಚಿ ಪರಾರಿಯಾಗಿದ್ದರು! ಬಸ್ ಕಂಡಕ್ಟರ್ ಮಾಹಿತಿಯ ಮೇರೆಗೆ ಪೊಲೀಸರು ತಂಡ ರಚನೆ ಮಾಡಿ ಹುಡುಕಾಟ ನಡೆಸಿದ್ದಾರೆ. ಸಿಸಿಟಿವಿ ಫೂಟೇಜ್ ಜಾಲಾಡಿದ್ದಾರೆ. ಭಟ್ಕಳ ಹೊನ್ನಾವರ ತಾಲೂಕುಗಳಲ್ಲಿ ತಪಾಸಣೆ ಮಾಡಿದಾಗ ದರೋಡೆಕೋರರ ಕಾರು ಮಿಸ್ಸಾಗಿದೆ. ಆದರೆ ಮರುದಿನ ಬೆಂಗಳೂರಿನಲ್ಲಿ ಕಾರು ಪತ್ತೆ ಆಗುತ್ತೆ. ದೇವನಹಳ್ಳಿಯಲ್ಲಿ ಮತ್ತೆ ಮಿಸ್ ಆಗಿ ಮಹಾರಾಷ್ಟ್ರದಲ್ಲಿ ತಂಡದ ಇರುವಿಕೆ ಟ್ರ್ಯಾಕ್ ಆಗಿದೆ.
ಮಹಾರಾಷ್ಟ್ರದ ದುಲೇ ಜಿಲ್ಲೆಯಲ್ಲಿದ್ದ ಆರೋಪಿಗಳಾದ ಅಲೀಖಾನ್, ಅಮ್ಜತ್, ಇಕ್ರಾರ್ ಖಾನ್, ಗೋಪಾಲ್ ಅಮಾಲೋವರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ದರೋಡೆಕೋರರು, ಹೊಂಚುಹಾಕಿ ದರೋಡೆ ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದರು! ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
PublicNext
23/06/2022 10:06 pm