ಮಂಗಳೂರು: ಮೋದಿ ಸರಕಾರ ಡಿಜಿಟಲ್ ಪೇಮೆಂಟ್ ಗೆ ಒತ್ತು ನೀಡಿದ ಬಳಿಕ ದೇಶಾದ್ಯಂತ ಕ್ಯಾಶ್ ಲೆಸ್ ವ್ಯವಹಾರ ಬಹಳಷ್ಟು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಇಂತಹ ಕ್ಯಾಶ್ ಲೆಸ್ ವ್ಯವಹಾರಗಳೇ ನಡೆಯುತ್ತಿದೆ. ಆದರೆ, ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ಸೈಬರ್ ಖದೀಮರು ಡಿಜಿಟಲ್ ಪೇಮೆಂಟ್ ಮೂಲಕವೇ ಭಾರೀ ಧೋಖಾ ನಡೆಸುತ್ತಿದ್ದಾರೆ. ಇಂತಹ ವಂಚನೆಗಳಿಗೆ ಸಿಲುಕಿರುವ ಹಲವು ಮಂದಿ ಉದ್ಯಮಿಗಳು, ವ್ಯಾಪಾರಿಗಳು ಹಣ ಕಳೆದುಕೊಂಡು ಪೊಲೀಸ್ ಠಾಣೆಯ ಕದ ತಟ್ಟುತ್ತಿದ್ದಾರೆ.
ಜನರು ಕ್ಯಾಶ್ ಲೆಸ್ ವ್ಯವಹಾರಗಳತ್ತ ಒಲವು ತೋರಿಸುತ್ತಿದ್ದಂತೆಯೇ ವ್ಯಾಪಾರಿಗಳು ತಮ್ಮ ವಹಿವಾಟು ಡಿಜಿಟಲೈಸ್ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ತಮ್ಮ ವ್ಯಾಪಾರ ವಹಿವಾಟು ನಡೆಯುವ ಸ್ಥಳ, ಅಂಗಡಿ-ಮಳಿಗೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲು ಆರಂಭಿಸಿದ್ದಾರೆ. ಇಂತಹ ಮಳಿಗೆಗಳಿಗೆ ಗ್ರಾಹಕರ ಸೋಗಿನಲ್ಲಿ ಬರುವ ಸೈಬರ್ ಖದೀಮರು ತಮಗೆ ಬೇಕಾಗುವ ವಸ್ತು ಖರೀದಿಸಿ ಡಿಜಿಟಲ್ ಪೇಮೆಂಟ್ ಮಾಡುತ್ತಾರೆ. ಆದರೆ, ಹಣ ಪಾವತಿಯಾಗಿರುವ ಸೂಚನೆ ಅವರ ಮೊಬೈಲ್ ನಲ್ಲಿ ತೋರಿಸುತ್ತದೆ. ಹಣ ಪಾವತಿಯಾದ ಬಗ್ಗೆ ಅಂಗಡಿ ಮಾಲೀಕನಿಗೂ ಮೆಸೇಜ್ ಬರುತ್ತದೆ. ಆದರೆ, ಹಣ ಖಾತೆಗೆ ಜಮೆ ಆಗಿರುವುದಿಲ್ಲ!
ಅಂಗಡಿ, ಮಳಿಗೆಗಳ ಕ್ಯೂಆರ್ ಕೋಡ್ ಬಗ್ಗೆಯೂ ಮಾಲೀಕರು ನಿಗಾ ಇರಿಸಬೇಕಾಗುತ್ತದೆ. ಕೆಲ ಕಡೆಗಳಲ್ಲಿ ಅಂಗಡಿಗಳ ಕ್ಯೂಆರ್ ಕೋಡ್ ಮೇಲೆ ಸೈಬರ್ ಖದೀಮರು ತಮ್ಮ ಕೋಡ್ ಅಂಟಿಸಿ ಭಾರೀ ವಂಚನೆ ನಡೆಸುತ್ತಿದ್ದಾರೆ. ಈ ಮೂಲಕ ಕ್ಯೂಆರ್ ಕೋಡ್ ಬಳಸಿ ಪೇಮೆಂಟ್ ಮಾಡಿರುವ ಗ್ರಾಹಕರ ಹಣ ಸೈಬರ್ ವಂಚಕರ ಪಾಲಾಗುತ್ತದೆ. ಈ ಬಗ್ಗೆ ಎಚ್ಚರಿಕೆ ಅತ್ಯಗತ್ಯ ಎಂದು ಪೊಲೀಸರು, ಸೈಬರ್ ತಂತ್ರಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಅನೇಕ ದೂರುಗಳು ದಾಖಲಾಗುತ್ತಿದೆ. ಪೊಲೀಸರೂ ಇಂತಹ ಮೋಸದಾಟಕ್ಕೆ ಕಡಿವಾಣ ಹಾಕಲು ಸೈಬರ್ ಖದೀಮರ ಮೇಲೆ ನಿಗಾ ಇರಿಸಿದ್ದಾರೆ.
PublicNext
02/04/2022 06:51 pm