ಹಿರಿಯಡ್ಕ: ಉಡುಪಿಯ ಹಿರಿಯಡ್ಕ ಪೇಟೆಯಲ್ಲಿ ಕಿಶನ್ ಹೆಗ್ಡೆ ಕತ್ತು ಕತ್ತರಿಸಿದ ಖತರ್ನಾಕ್ ಟೀಂ ಗೆ ಪೊಲೀಸರು ಬಲೆ ಬೀಸಿದ್ದಾರೆ. ಎರಡು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಗೆ ಪೊಲೀಸರು ತಲಾಶ್ ಶುರು ಮಾಡಿದ್ದಾರೆ.
ಈ ಸಂಬಂಧ ಪೊಲೀಸರು ನಾಲ್ಕು ತಂಡ ರಚನೆ ಮಾಡಿದ್ದಾಗಿ ಎಎಸ್ಪಿ ಕುಮಾರಚಂದ್ರ ಹೇಳಿದ್ದಾರೆ.
ಗುರುವಾರ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ನಡುಮಧ್ಯಾಹ್ನ ನಡುರಸ್ತೆಯಲ್ಲಿ ಕಿಶನ್ ಹೆಗ್ಡೆ ಬರ್ಬರ ಹತ್ಯೆಯಾಗಿತ್ತು. ಉಡುಪಿಗೆ ಉಡುಪಿಯೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು.
ಘಟನೆಗೆ ಸಂಬಂಧಿಸಿ, ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ಮಂಗಳೂರು ರಿಜಿಸ್ಟ್ರೇಶನ್ ಕಾರಿನಲ್ಲಿ ಬಂದಿದ್ದ ದುಷ್ಟರ ತಂಡ ಕಾರ್ಕಳದ ಇರ್ವತ್ತೂರು ಸಮೀಪ ಒಂದು ಕಾರನ್ನು ಬಿಟ್ಟು ಹೋಗಿದೆ.
ಇನ್ನೊಂದು ಕಾರು ಕೆಂಜಾರು ಪ್ರದೇಶದಲ್ಲಿ ಸಿಕ್ಕಿದ್ದು, ಪೊಲೀಸರು ಎರಡು ಕಾರುಗಳನ್ನು ವಶಪಡಿಸಿದ್ದಾರೆ. ಪ್ರಕರಣದ ತನಿಖೆಗೆ ಉಡುಪಿಯ ಹಿರಿಯ ಪೊಲೀಸ್ ಅಧಿಕಾರಿಗಳು ನಾಲ್ಕು ತಂಡ ಸಜ್ಜುಗೊಳಿಸಿದ್ದಾರೆ.
ದುಷ್ಕರ್ಮಿಗಳಿಂದ ದಾಳಿ ಆಗುವ ಸಂದರ್ಭ ಕಿಶನ್ ಹೆಗ್ಡೆ ಜೊತೆ ದಿವ್ಯರಾಜ್ ಶೆಟ್ಟಿ ಮತ್ತು ಹರಿಪ್ರಸಾದ್ ಶೆಟ್ಟಿ ಇದ್ದರು. ತಲವಾರು ದಾಳಿ ಸಂದರ್ಭ ತಪ್ಪಿಸಿಕೊಂಡು ಹರಿಪ್ರಸಾದ್ ಶೆಟ್ಟಿ ಓಡಿ ಹೋಗಿದ್ದರು.
ತಲವಾರು ದಾಳಿ ತಡೆಯಲು ದಿವ್ಯ ರಾಜ ಶೆಟ್ಟಿ ಪ್ರಯತ್ನಪಟ್ಟಿದ್ದಾರೆ. ತಲವಾರು ದಾಳಿ ಮಾಡಿದ್ದು ಮನೋಜ್ ಕೋಡಿಕೆರೆ ಮತ್ತು ತಂಡ ಎಂದು ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೋಜ್ ಕೋಡಿಕೆರೆ ಮತ್ತು ಆತನ ಸಹಚರರು ದಾಳಿ ಮಾಡಿರುವುದಾಗಿ ದೂರಿನಲ್ಲಿ ದಿವ್ಯ ರಾಜ್ ಶೆಟ್ಟಿ ಉಲ್ಲೇಖಿಸಿದ್ದಾರೆ. ಹಿರಿಯಡ್ಕ ಜಂಕ್ಷನ್ ನಲ್ಲಿ ದಾಳಿ ನಡೆದಿದ್ದು ಸುಮಾರು ಐವತ್ತು ಮೀಟರ್ ದೂರದಲ್ಲಿ ಕಿಶನ್ ಹೆಗ್ಡೆ ಬಿದ್ದು ಮೃತಪಟ್ಟಿದ್ದಾರೆ.
ಸುತ್ತಮುತ್ತ ರಸ್ತೆಯ ಸಿಸಿ ಟಿವಿಗಳನ್ನು ಮತ್ತು ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಪೊಲೀಸರು ಕಲೆ ಹಾಕುತ್ತಿರುವುದಾಗಿ
ಅಡಿಷನಲ್ ಎಸ್ ಪಿ ಕುಮಾರಚಂದ್ರ ಹೇಳಿದ್ದಾರೆ.
Kshetra Samachara
26/09/2020 12:36 pm