ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಸಿನಿಮಾವೊಂದು ವೀಕ್ಷಕನ ಮೇಲೆ ಉತ್ತಮ ಪರಿಣಾಮವಷ್ಟೇ ಅಲ್ಲ ಕೆಟ್ಟ ಪರಿಣಾಮವನ್ನು ಬೀರಿದ್ದೂ ಇದೆ. ಇತ್ತೀಚೆಗೆ ರಿಲೀಸ್ ಆಗಿರುವ ಶ್ವಾನ ಹಾಗೂ ಮನುಷ್ಯ ಸಂಬಂಧದ ಬಗ್ಗೆ ಚಿತ್ರೀಕರಣಗೊಂಡ 'ಚಾರ್ಲಿ 777' ಸಿನಿಮಾ ಇದಕ್ಕೆ ಹೊರತಾಗಿಲ್ಲವೆಂಬ ಕಳವಳವನ್ನು ಶ್ವಾನಪ್ರಿಯರು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಿನಿಮಾದಲ್ಲಿ ಅಂತಹ ದುಷ್ಪರಿಣಾಮ ಬೀರುವ ಯಾವುದೇ ದೃಶ್ಯ ಇಲ್ಲವಲ್ಲ ಎಂದು ಎಲ್ಲರೂ ಹುಬ್ಬೇರಿಸಬಹುದು. ಆದರೆ ಶ್ವಾನಪ್ರಿಯ ಅರುಲ್ ಅವರ ಮಾತು ಕೇಳಿದರೆ ಒಂದು ಸಲ ಹೌದಲ್ಲಾ ಎಂದು ನಾವು ಮೆತ್ತಗಾಗುತ್ತೇವೆ.
ಹೌದು 'ಚಾರ್ಲಿ 777' ಸಿನಿಮಾ ವೀಕ್ಷಿಸಿದ ಎಲ್ಲರೂ ತಮಗೂ ಅಂತಹದ್ದೇ ಶ್ವಾನವೊಂದು ಬೇಕು ಎಂದು ಹಪಹಪಿಸೋದು ಅಧಿಕವಾಗಿದೆ. ಅದರಲ್ಲೂ ಲ್ಯಾಬ್ರಡಾರ್ ತಳಿಯ ಶ್ವಾನಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಪರಿಣಾಮ ಅದರ ದರವೂ ಅಧಿಕವಾಗಿದೆ. ಇಷ್ಟೇ ಆದರೆ ಅದೇನು ದೊಡ್ಡ ವಿಚಾರವಾಗೋದಿಲ್ಲ. ಆದರೆ ಇಂತಹ ಶ್ವಾನ ಮೋಹದಿಂದ ಆ ಮೂಕ ಪ್ರಾಣಿಯು ಇನ್ನಿಲ್ಲದ ಯಾತನೆಯನ್ನು ಅನುಭವಿಸುತ್ತಿದೆ. ನಗರವೊಂದರಲ್ಲಿ ಶ್ವಾನದ ಕೊರತೆಯಾದಾಗ ಮತ್ತೊಂದೆಡೆಗೆ ಶ್ವಾನ ಮರಿಗಳನ್ನು ಬಾಕ್ಸ್ ಗಳಲ್ಲಿ ತುಂಬಿಸಿ ಬಸ್ ನಲ್ಲಿ ಪಾರ್ಸೆಲ್ ಮಾಡಲಾಗುತ್ತದೆ. ಪರಿಣಾಮ ಹೆದರಿಕೆಯಿಂದ ಶ್ವಾನಮರಿ ಆಘಾತಕ್ಕೊಳಗಾಗುತ್ತದೆ. ಕೆಲವೊಮ್ಮೆ ಉಸಿರುಗಟ್ಟಿ ಸತ್ತ ಉದಾಹರಣೆಯೂ ಇದೆ. ಅಲ್ಲದೆ ಬೇಡಿಕೆ ಹೆಚ್ಚಿದಂತೆ ಮಾರಾಟಗಾರರು ಲಾಭದ ದೃಷ್ಟಿಯಿಂದ ಅವೈಜ್ಞಾನಿಕ ರೀತಿಯಲ್ಲಿ ಸಂತಾನಾಭಿವೃದ್ಧಿ ಮಾಡುತ್ತಿದ್ದಾರೆ. ಇದು ಹೆಣ್ಣು ನಾಯಿಯ ಮೇಲೆ ಆಗುತ್ತಿರುವ ದೌರ್ಜನ್ಯವಲ್ಲದೆ ಮತ್ತೇನು ಅಲ್ಲವೆಂದು ಶ್ವಾನಪ್ರಿಯರು ಮರುಗುತ್ತಿದ್ದಾರೆ.
ಲ್ಯಾಬ್ರಡಾರ್ ಶ್ವಾನವು ಸದಾ ಮನುಷ್ಯ ಪ್ರೀತಿಯನ್ನು ಬಯಸುವ ತಳಿ. ಒಂದು ಸಲ ಸಲುಗೆ ತೋರಿಸಿದ್ದಲ್ಲಿ ಗುರುತು ಪರಿಚಯ ಇಲ್ಲದವರೊಂದಿಗೂ ಬೆರೆಯುತ್ತದೆ. ಆದರೆ ಸಿನಿಮಾ ನೋಡಿದ ಹುಮ್ಮಸ್ಸಿನಿಂದ ತಮಗೂ ಅದೇ ತಳಿಯ ಶ್ವಾನ ಬೇಕು, ತಮ್ಮೊಂದಿಗೂ ಶ್ವಾನ ಅದೇ ರೀತಿ ಬೆರೆಯಬೇಕು, ಈ ಮೂಲಕ ಎಲ್ಲರನ್ನೂ ತಮ್ಮತ್ತ ಆಕರ್ಷಿಸಬೇಕೆಂಬ ಮಾನಸಿಕತೆ ಮಾತ್ರ ಅಪಾಯಕಾರಿ. ಯಾಕೆಂದರೆ ಇಂತಹ ತೋರ್ಪಡಿಕೆಗಿಂತ ಆ ಶ್ವಾನಗಳಿಗೆ ಉತ್ತಮ ಪೋಷಣೆಯ, ಲಾಲನೆ-ಪಾಲನೆಯ ಅಗತ್ಯತೆಯಿದೆ. ಆದ್ದರಿಂದ ಶ್ವಾನಗಳನ್ನು ಸಾಕುವ ಮೊದಲು ತಮಗೆ ಅವುಗಳ ಆರೈಕೆ ಸಾಧ್ಯವೇ ಎಂದು ನೂರು ಬಾರಿ ಯೋಚನೆ ಮಾಡುವುದು ಒಳಿತು. ಆರೈಕೆಯ ಅರಿವಿಲ್ಲದೆ ಮೂಕಪ್ರಾಣಿಗಳನ್ನು ಸಂಕಷ್ಟಕ್ಕೀಡು ಮಾಡುವುದು ಬುದ್ಧಿಜೀವಿಯಾದ ಮನುಷ್ಯನಿಗೆ ತಕ್ಕುದಾದ ಧರ್ಮವಲ್ಲ. ಆದ್ದರಿಂದ ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯತೆಯಿದೆ.
PublicNext
22/06/2022 04:15 pm