ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಪಿಎಸ್ ಐ ಹಗರಣದಿಂದ ರಾಜ್ಯ ಪೊಲೀಸ್ ಇಲಾಖೆ ಭಾರೀ ಸುದ್ದಿಯಲ್ಲಿದೆ. ಈ ಹಗರಣ ಸದ್ದು ಮಾಡುತ್ತಿರುವ ಹೊತ್ತಿಗೇ ಉಡುಪಿಯಲ್ಲಿ ಶಸಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇವರು ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದಕ್ಕೆ ಸದ್ಯ ಉತ್ತರ ಸಿಕ್ಕಿಲ್ಲ.ಆದರೆ ಇಲಾಖೆಗೆ ಇದು ಎಚ್ಚರಿಕೆ ಕರೆಗಂಟೆ.
ಇವತ್ತು ಆದಿವುಡುಪಿ ದಿ. ಅಮ್ಮುಂಜೆ ನಾಗೇಶ್ ನಾಯಕ ಸ್ಮಾರಕ ಪ್ರೌಢಶಾಲೆಯಲ್ಲಿ ಸಶಸ್ತ್ರ ಮೀಸಲು ಪಡೆಯ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ತಮ್ಮ ರೈಫಲ್ ನಿಂದ ಕುತ್ತಿಗೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದಿಉಡುಪಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಸ್ಟ್ರಾಂಗ್ ರೂಮ್ ನಲ್ಲಿ ಇಡಲಾಗಿದೆ. ಇದಕ್ಕೆ ಮೂರು ಜನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನೇಮಕ ಮಾಡಲಾಗಿತ್ತು. ಇಂದು ಬೆಳಗಿನ ಜಾವ ಇಬ್ಬರು ಸಿಬ್ಬಂದಿಗಳು ಸ್ಥಳದಲ್ಲಿ ಇಲ್ಲದ ಸಂದರ್ಭ ತನ್ನ ರೈಫಲ್ನಿಂದ ಕುತ್ತಿಗೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗುಂಡು ಹಾರಿದ ರಭಸಕ್ಕೆ ಅವರ ಮೆದುಳಿನ ಭಾಗ ಛಿದ್ರವಾಗಿದೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಆರ್ಥಿಕ ಸಮಸ್ಯೆ ಹಾಗೂ ಮಾನಸಿಕ ಒತ್ತಡ, ವೇತನ, ಆರೋಗ್ಯ, ಸಿಬ್ಬಂದಿ ಕೊರತೆ ಹಾಗೂ ಆಡರ್ಲಿ ಪದ್ಧತಿಯ ಪರಿಣಾಮ 250ಕ್ಕೂ ಅಧಿಕ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಸಾವಿಗೆ ಶರಣಾಗಬಾರದು ಎಂದು ನಿವೃತ್ತ ಪೊಲೀಸ್ ಸಂದೀಪ್ ಕುಮಾರ್ ಎಂ. ಪಬ್ಲಿಕ್ ನೆಕ್ಸ್ಟ್ ಗೆ ಹೇಳಿದ್ದಾರೆ.
ಇನ್ನು ಪೊಲೀಸ್ ಕರ್ತವ್ಯಕ್ಕೆ ಸಂಬಂಧಪಟ್ಟಂತೆ ಕೆಲದಿನಗಳ ಹಿಂದೆ ರಾಜೇಶ್ ಕುಂದರ್ ಸಸ್ಪೆಂಡ್ ಆಗಿದ್ದರು. 2 ದಿನಗಳ ಹಿಂದೆಯಷ್ಟೆ ರಾಜೇಶ್ ಕುಂದರ್ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರನ್ನು ಶಾಲಾ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.ಅವರಿಗೆ ಕೆಲಸದ ಒತ್ತಡ ಇತ್ತೆ? ಮೇಲಧಿಕಾರಿಗಳಿಂದ ಕಿರುಕುಳ ಇತ್ತೆ? ವೇತನ ತಾರತಮ್ಯ ಅನುಸರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರೆ? ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ.
ಉಡುಪಿ ಎಸ್ಪಿ ವಿಷ್ಣುವರ್ಧನ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಮಣಿಪಾಲ ಕೆಎಂಸಿ ಮತ್ತು ಮಂಗಳೂರಿನ ಆರ್ ಎಫ್ ಎಸ್ ಎಲ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಈ ಅತ್ಮಹತ್ಯೆ ಕೇವಲ ಉಡುಪಿಯ ಒಬ್ಬ ಪೊಲೀಸ್ ಪೇದೆಗೆ ಸಂಬಂಧಿಸಿದ್ದಲ್ಲ.ರಾಜ್ಯ ಪೊಲೀಸರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಇಲಾಖೆಗೊಂದು ಎಚ್ಚರಿಕೆ ಕರೆಗಂಟೆಯೂ ಹೌದು.
PublicNext
29/04/2022 05:10 pm