ಸುರತ್ಕಲ್: ದುಷ್ಕರ್ಮಿಗಳ ದಾಳಿಗೊಳಿಗಾದ ಫಾಝಿಲ್ ಹತ್ಯೆಯಾದ ಸುರತ್ಕಲ್ ನ ವಸ್ತ್ರಮಳಿಗೆಯ ರಸ್ತೆಯಲ್ಲಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸ್ಥಳ ಮಹಜರು ಆಗದ ಕಾರಣ ದುಷ್ಕರ್ಮಿಗಳ ದಾಳಿಗೊಳಗಾದ ವಸ್ತ್ರಮಳಿಗೆ ಇನ್ನೂ ತೆರೆದೇ ಇದೆ.
ಸುರತ್ಕಲ್ ಜಂಕ್ಷನ್ ನಲ್ಲಿನ ಬಿಜೇಸ್ ಫ್ಯಾಷನ್ ಕಲೆಕ್ಷನ್ ಮುಂಭಾಗ ನಿನ್ನೆ ರಾತ್ರಿ 8.30 ಸುಮಾರಿಗೆ ದುಷ್ಕರ್ಮಿಗಳು ಫಾಝಿಲ್ ನನ್ನು ಹತ್ಯೆ ಮಾಡಿದ್ದರು. ಸ್ಥಳ ಮಹಜರು ಆಗದಿರುವುದರಿಂದ ವಸ್ತ್ರಮಳಿಗೆ ತೆರೆದೇ ಇದೆ. ಉಳಿದ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಮಾಡಲಾಗಿದೆ. ಸುರತ್ಕಲ್ ಜಂಕ್ಷನ್ ನಲ್ಲಿಯೇ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳು ಸಂಚರಿಸದಂತೆ ಬಿಗಿ ಪೊಲೀಸ್ ವ್ಯವಸ್ಥೆ ಇರಿಸಲಾಗಿದೆ.
ವಸ್ತ್ರಮಳಿಗೆಯ ಮುಂಭಾಗ ಗೆಳೆಯರೊಂದಿಗೆ ಮಾತನಾಡುತ್ತಿದ್ದ ವೇಳೆ ಫಾಝಿಲ್ ಮೇಲೆ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.
ಈ ವೇಳೆ ಪಾಝಿಲ್ ಓಟಕ್ಕಿತ್ತಿದ್ದು, ಅವರ ಎರಡೂಶೂಗಳು ಅಂಗಡಿ ಮುಂಭಾಗ ಬಿದ್ದಿವೆ, ಅಲ್ಲದೆ ಮಳಿಗೆಯ ಮುಂಭಾಗದ ರಸ್ತೆಯಲ್ಲಿ, ಪಾರ್ಕಿಂಗ್ ಮಾಡಿದ್ದ ಸ್ಕೂಟರ್, ಹಾಗೂ ಅಂಗಡಿ ಗಾಜುಗಳ ಮೇಲೆ ರಕ್ತದ ಕಲೆಗಳು ಕಂಡು ಬರುತ್ತಿದೆ. ಇನ್ನೂ ಸ್ಥಳ ಮಹಜರು ಆಗದ ಹಿನ್ನೆಲೆಯಲ್ಲಿ ಎಲ್ಲವೂ ಹಾಗೆಯೇ ಇದೆ.
ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಸ್ಥಳದಲ್ಲಿ ಇನ್ನೂ ಬಿಗುವಿನ ವಾತಾವರಣವೇ ಇದೆ. ಸದಾ ಜನಜಂಗುಳಿ, ಸಾವಿರಾರು ವಾಹನಗಳ ಓಡಾಟದಿಂದ ಕಿಕ್ಕಿರಿಯುತ್ತಿದ್ದ ಸ್ಥಳ ಸಂಪೂರ್ಣ ಬಿಕೋ ಎನ್ನುತ್ತಿದೆ. ಅಲ್ಲೊಬ್ಬ ಇಲ್ಲೊಬ್ಬ ಪಾದಚಾರಿಗಳಷ್ಟೇ ಈ ಸ್ಥಳದಲ್ಲಿ ಓಡಾಡುತ್ತಿದ್ದಾರೆ. ಒಟ್ಟಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
PublicNext
29/07/2022 03:28 pm