ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯ ರಾತ್ರಿಯೇ ಫಾಝಿಲ್ ಕೊಲೆಗೆ ಸಂಚು: ಆತನೇ ಟಾರ್ಗೆಟ್ ಏಕೆ?

ಮಂಗಳೂರು: ದ.ಕ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದೀಗ ಸುರತ್ಕಲ್‌ನ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ‌.

ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿ(29), ಕುಳಾಯಿ ಕಾವಿನಕಲ್ಲು ನಿವಾಸಿ ಮೋಹನ್ ಸಿಂಗ್(26), ಕುಳಾಯಿ ವಿದ್ಯಾನಗರ ನಿವಾಸಿ ಗಿರಿಧರ್(23), ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್(21), ಶ್ರೀನಿವಾಸ(23), ದೀಕ್ಷಿತ್(21) ಬಂಧಿತ ಆರೋಪಿಗಳು. ಈ ಕೃತ್ಯದಲ್ಲಿ ಬಳಸಲಾಗಿರುವ ಕಾರಿನ ಮಾಲಕ ಅಜಿತ್ ಕ್ರಾಸ್ತಾನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ಆತ ಬಾಯಿ ಬಿಟ್ಟಿದ್ದಾನೆ. ಆರೋಪಿಗಳು ಕೃತ್ಯ ಎಸಗುವ ಬಗ್ಗೆ ಮಾಹಿತಿ ಇದ್ದರೂ ಆತ ಹಣದಾಸೆಗೆ ಕಾರು ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯ ರಾತ್ರಿಯೇ ಯಾರನ್ನಾದರೂ ಕೊಲೆ ಮಾಡಬೇಕೆಂದು ಸುಹಾಸ್ ಶೆಟ್ಟಿ ಹಾಗೂ ಅಭಿಷೇಕ್ ನಡುವೆ ಚರ್ಚೆ ನಡೆದಿದೆ. ಮರುದಿನವೂ ಈ ಬಗ್ಗೆ ಚರ್ಚೆಯಾಗಿದ್ದು, ಅಲ್ಲಿ ಮೋಹನ್ ಸಿಂಗ್ ಇವರಿಗೆ ಜೊತೆಯಾಗುತ್ತಾನೆ. ಆತ ತನ್ನ ಬಳಗದ ಗಿರಿಧರ್, ಶ್ರೀನಿವಾಸ ಹಾಗೂ ದೀಕ್ಷಿತ್ ಎಂಬವರನ್ನು ಈ ಕೃತ್ಯಕ್ಕೆ ಸೇರ್ಪಡಿಸುತ್ತಾನೆ. ಗಿರಿಧರ್ ಕೃತ್ಯ ಎಸಗಲು ಅಜಿತ್ ಕ್ರಾಸ್ತಾನಿಂದ ಕಾರು ಬಾಡಿಗೆ ಪಡೆದಿದ್ದಾನೆ. ಫಾಝಿಲ್ ಹತ್ಯೆ ನಡೆದ ಜುಲೈ 28ರಂದು ಬೆಳಗ್ಗೆ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸುಹಾಸ್ ಶೆಟ್ಟಿ ಹಾಗೂ ತಂಡ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳಿತ್ತು. ಅಲ್ಲಿಂದ ಬರುವ ವೇಳೆ ಮಂಕಿಕ್ಯಾಪ್ ಗಳನ್ನು‌ ರೆಡಿ ಮಾಡಿಕೊಂಡಿದ್ದಾರೆ.

ಈ ನಡುವೆ ಯಾರನ್ನು ಹತ್ಯೆ ಮಾಡಬೇಕೆಂದು ಆರೂ ಮಂದಿಯ ನಡುವೆ ಚರ್ಚೆ ನಡೆದಿದೆ. ಕೊನೆಗೆ ಫಾಝಿಲ್ ಕೊಲೆಗೆ ಸ್ಕೆಚ್ ಹಾಕಲಾಗಿದೆ. ಕೊಲೆ ನಡೆದ ದಿನ ಕಿನ್ನಿಗೋಳಿ ಬಾರ್‌ನಲ್ಲಿ ಊಟ ಮಾಡಿದ ತಂಡ ಫಾಝಿಲ್ ಹೆಚ್ಚಾಗಿ ಇರುವ ಸುರತ್ಕಲ್, ಮಂಗಳಪೇಟೆ ಪರಿಸರದಲ್ಲಿ ಕಾರಿನಲ್ಲಿ ಸುತ್ತಾಡಿದೆ‌. ಈ ವೇಳೆ ಸುರತ್ಕಲ್ ಫಾಝಿಲ್ ಅಂಗಡಿ ಮುಂಭಾಗ ಇರುವುದು ತಿಳಿದು ಬಂದಿದೆ. ಈ ವೇಳೆ ಗಿರಿಧರ್ ಕಾರು ಚಾಲಕನಾಗಿದ್ದ. ದೀಕ್ಷಿತ್ ಕಾರಿನಲ್ಲಿದ್ದ. ಶ್ರೀನಿವಾಸ ಯಾರಾದರೂ ಬರುತ್ತಾರೆಯೇ ಎಂದು ಪರಿಶೀಲನೆ ನಡೆಸುತ್ತಿದ್ದ. ಸುಹಾಸ್ ಶೆಟ್ಟಿ, ಮೋಹನ್ ಸಿಂಗ್ ಹಾಗೂ ಅಭಿಷೇಕ್ ಮಾರಕಾಸ್ತ್ರಗಳನ್ನು ಹಿಡಿದು ಫಾಝಿಲ್ ಮೇಲೆ ಮಾರಣಾಂತಿಕ ದಾಳಿ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ‌. ಅಲ್ಲಿಂದ ಕಾರಿನಲ್ಲಿ ಪರಾರಿಯಾದ ಹಂತಕರು ಪಲಿಮಾರು ಮೂಲಕ ಹೋಗಿ ಇನ್ನಾದಲ್ಲಿ ಆ ಕಾರನ್ನು ಇಟ್ಟು ಮತ್ತೊಂದು ಕಾರು ತರಿಸಿಕೊಂಡು ಅದರಲ್ಲಿ ತಲೆ ಮರೆಸಿಕೊಂಡಿದ್ದರು.

ಪೊಲೀಸ್ ಇಲಾಖೆ 8 ತಂಡಗಳನ್ನು ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಇಂದು ಉದ್ಯಾವರದ ಬಳಿ ಆರೂ ಮಂದಿಯನ್ನು ಬಂಧಿಸಿದ್ದಾರೆ. ಎಸಿಪಿ ಮಹೇಶ್ ಕುಮಾರ್ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Somashekar
PublicNext

PublicNext

02/08/2022 05:33 pm

Cinque Terre

54.55 K

Cinque Terre

28

ಸಂಬಂಧಿತ ಸುದ್ದಿ