ಮಂಗಳೂರು: ಉದ್ಯೋಗಿಯಿಂದಲೇ ಬ್ಯಾಂಕ್ ಹಣ ದುರುಪಯೋಗ ದೇರಳಕಟ್ಟೆಯ ವಿಜಯಾಬ್ಯಾಂಕ್ ಯೆನೆಪೊಯ ಯುನಿವರ್ಸಿಟಿಯ ಬ್ರ್ಯಾಂಚ್ ನೌಕರ ವಿಕಾಸ್ ವಿ. ಶೆಟ್ಟಿಗೆ 2ನೇ ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಬ್ಯಾಂಕ್ ಮ್ಯಾನೇಜರ್ ಸಂದೀಪ್ ಗದ್ದೆಯವರು 2017ರ ಡಿಸೆಂಬರ್ 28-30 ರವರೆಗೆ ರಜೆಯಲ್ಲಿದ್ದರು. ಈ ವೇಳೆ ವಿಕಾಸ್ ವಿ. ಶೆಟ್ಟಿ ಪ್ರಭಾರದಲ್ಲಿದ್ದರು. ಆದರೆ 2017ರ ಡಿಸೆಂಬರ್ 29ರಂದು ಸಂಜೆ ಬ್ಯಾಂಕ್ ಸಿಬ್ಬಂದಿ ಕ್ಲೋಸಿಂಗ್ ಕ್ಯಾಶ್‌ನ್ನು ಬ್ಯಾಂಕ್‌ನ ಫಿನಾಕಲ್ ಸ್ವಾಫ್ಟ್ ವೇರ್‌ನಲ್ಲಿ ಟ್ಯಾಲಿ ಮಾಡಿದಾಗ ಕ್ಲೋಸಿಂಗ್ ಕ್ಯಾಶ್ ಟ್ಯಾಲಿಯಾಗದೆ 27,29,875 ರೂ. ಕಡಿಮೆ ಇತ್ತು. ಈ ಬಗ್ಗೆ ವಿಕಾಸ್ ವಿ.ಶೆಟ್ಟಿಯಲ್ಲಿ ವಿಚಾರಿಸಿದಾಗ, ಈ ಹಣವನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡಿದ್ದನು. ಹಾಗೂ ಈ ಹಣವನ್ನು ಡಿಸೆಂಬರ್ 31ರಂದು ಬ್ಯಾಂಕಿಗೆ ಮರು ಪಾವತಿ ಮಾಡಿದ್ದಾನೆ. ಆದರೆ ಆರೋಪಿ ಸಾರ್ವಜನಿಕ ಹಣವನ್ನು ತನ್ನ ಸ್ವಂತ ಉಪಯೋಗಕ್ಕೆ ದುರುಪಯೋಗ ಪಡಿಸಿ ನಂಬಿಕೆ ದ್ರೋಹ ಎಸಗಿರುವುದಾಗಿ ಮಂಗಳೂರು ಇಕಾನಮಿಕ್ & ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ವಿಚಾರಣೆಯನ್ನು ನಡೆಸಿ ವಾದ ವಿವಾದವನ್ನು ಆಲಿಸಿರುವ 2ನೇ ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಮಧುಕರ ಪಿ. ಭಾಗವತ್ ಕೆ.ಯವರು ವಿಕಾಸ್.ವಿ.ಶೆಟ್ಟಿ ತಪ್ಪಿತಸ್ಥನೆಂದು ನಿರ್ಣಯಿಸಿ 406 ರಡಿಯ ಅಪರಾಧಕ್ಕಾಗಿ 1 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, 409ರಡಿಯ ಅಪರಾಧಕ್ಕಾಗಿ 3 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.
Kshetra Samachara
20/07/2022 10:50 pm