ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು
ಮಂಗಳೂರು: ನಗರದ ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ನವೆಂಬರ್ ತಿಂಗಳ ರಾತ್ರಿಯೊಂದರಲ್ಲಿ ಉದ್ಯಮಿ ವೆನ್ಝ್ ಅಬ್ದುಲ್ ಅಝೀಝ್ ಎಂಬವರ ಮೇಲೆ ಕಂದಾವರ ಮಸೀದಿ ಬಳಿ ಮಾರಕಾಸ್ತ್ರಗಳಿಂದ ದಾಳಿಯಾಗುತ್ತೆ. ಮೊದಲೇ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಈ ವಿಚಾರ ಒಂದೊಮ್ಮೆ ಆತಂಕಕ್ಕೂ ಕಾರಣವಾಗುತ್ತೆ. ದಾಳಿಯ ಭೀಕರತೆ ಅತ್ತ ಸಿಸಿಟಿವಿಯಲ್ಲೂ ಚೆನ್ನಾಗಿಯೇ ಸೆರೆಯಾಗಿರುತ್ತೆ.
ಇನ್ನೇನಿದ್ರೂ ಆರೋಪಿಗಳ ಹುಡುಕಾಟ ಪೊಲಿಸರ ಜವಾಬ್ದಾರಿ ಅಂತಲೇ ಭಾವಿಸಿಕೊಂಡಿದ್ರೆ, ಘಟನೆ ನಡೆದು ಕೆಲ ದಿನಗಳೇ ಕಳೆದರೂ ಇದುವರೆಗೂ ಘಟನೆ ಸಂಬಂಧ ಒಬ್ಬನೇ ಒಬ್ಬ ಆರೋಪಿಯ ಬಂಧನವಾಗಿದ್ದಿಲ್ಲ. ಈ ಮಧ್ಯೆ ವಾರವಾಗುತ್ತಲೇ ಅಝೀಝ್ ಚಿಕಿತ್ಸೆ ಪಡೆಯುತ್ತಿರುವ ಫಳ್ನೀರ್ ನ ಯುನಿಟಿ ಆಸ್ಪತ್ರೆ ಬಳಿ ಅಝೀಝ್ ಅವರ ಮಗಳ ಗಂಡ ನೌಶಾದ್ ಮೇಲೂ ತಲವಾರು ದಾಳಿಯಾಗುತ್ತೆ.
ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತೆ. ರಾತ್ರಿ ಆವರಿಸುತ್ತಿದ್ದಂತೆ ನಡೆದ ಈ ಘಟನೆಯೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಈ ಎರಡೂ ಪ್ರಕರಣದಲ್ಲೂ ಒಂದೇ ತಂಡ ಭಾಗವಹಿಸಿರುವ ಶಂಕೆ ಇದೆಯಾದ್ರೂ ಇದುವರೆಗೂ ಆರೋಪಿಗಳ ಬಂಧನ ನಡೆಸದಂತೆ ಪೊಲೀಸರ ಕೈಕಟ್ಟಿ ಹಾಕಿದ್ಯಾರು ಅನ್ನೋದು ಪ್ರಶ್ನೆಯಾಗಿ ಉಳಿದಿದೆ.
ಇದೆಲ್ಲದರ ನಡುವೆ ಇಂಟ್ರೆಸ್ಟಿಂಗ್ ಅನ್ನುವಂತೆ ಆಸ್ಪತ್ರೆ ಬೆಡ್ ಮೇಲೆ ಸದ್ಯ ಚೇತರಿಸಿಕೊಳ್ಳುತ್ತಿರುವ ಅಝೀಝ್ ತನ್ನ ಮೇಲಿನ ದಾಳಿಗೆ ಮಸೀದಿ ಹಣಕಾಸಿನ ವ್ಯವಹಾರ ಹಾಗೂ ಬೈಲುಪೇಟೆ ಜಮಾಲಿಯ್ಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಜಕ್ರಿಯೇ ಇದರ ಹಿಂದಿನ ಮಾಸ್ಟರ್ ಮೈಂಡ್ ಅಂತಾ ಆರೋಪಿಸಿದ್ದಾರೆ.
ಪೊಲೀಸರಿಗೂ ಅದೇ ದಾಟಿಯ ಹೇಳಿಕೆ ನೀಡಿದ್ದಾರೆ. ದಾಳಿ ನಡೆಯೋ ಸಂದರ್ಭ ಬಿ.ಜಕ್ರಿ ಹಲ್ಲೆಕೋರರಿಗೆ "ಅವ್ನು ಸಾಯೋ ತನಕ ಹೊಡೀರಿ.." ಅಂತಾ ಪ್ರಚೋದನೆ ನೀಡಿದ್ದಾಗಿ ಹೇಳಿದ್ದಾರೆ. ಅತ್ತ ಬಜ್ಪೆ ಪೊಲೀಸರು ಕೂಡಾ ಬಿ.ಜಕ್ರಿ, ಫಾರೂಕ್, ಪಿಟ್ಟರ್ ಹನೀಫ್ ಸಹಿತ ಎಂಟು ಮಂದಿಯನ್ನ ವಿಚಾರಿಸಿ ಸಾಗ ಹಾಕಿದ್ದಾರೆ.
ಹಾಗಂತ ಪೊಲೀಸರು ಅರೋಪಿಗಳನ್ನ ಬಿಟ್ಟು ಕಳುಹಿಸೋದಕ್ಕೆ ಬೇರೆಯದ್ದೇ ಕಾರಣಗಳಿವೆ. ಹಲ್ಲೆ ನಡೆಸಿರೋ ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆಯಾದ್ರೂ, ಎಫ್ಐಆರ್ ನಲ್ಲಿ ದಾಖಲಾಗಿದ್ದ ಈ ವ್ಯಕ್ತಿಗಳಿಗೂ ಅದ್ಯಾವುದೇ ಸಂಬಂಧ ಇಲ್ಲ ಅನ್ನೋದು ಸ್ಪಷ್ಟವಾಗಿದೆ.
ಸ್ವತಃ ಪ್ರಕರಣದ ಆರೋಪಿ ಅಂತಲೇ ಬಿಂಬಿತರಾಗಿರೋ ಬಿ. ಜಕ್ರಿ ಅವರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಕೃತ್ಯವನ್ನ ಸ್ವತಃ ಅಝೀಝ್ ಮಾಡಿಕೊಂಡಿದ್ದು ನಮ್ಮ ಜೈಲಿಗೆ ಹಾಕಬೇಕು ಅನ್ನೋ ಕಾರಣಕ್ಕಾಗಿ ಇಂತಹ ನಾಟಕವಾಡಿದ್ದಾನೆ ಅಂತಾ ಟಾಂಗ್ ನೀಡಿದ್ದಾರೆ.
ಒಟ್ಟಿನಲ್ಲಿ ಅಝೀಝ್ ಹಾಗೂ ಅವರ ಅಳಿಯ ನೌಶಾದ್ ಮೇಲೆ ನಡೆದಿರೋ ದಾಳಿ ಅಕ್ಷಮ್ಯ. ಹಾಗಂತ ಪ್ರಕರಣದ ದಿಕ್ಕು ತಪ್ಪಿಸೋ ಕೆಲಸ ನಡೆದಿದ್ಯಾ ಅನ್ನೋದನ್ನ ಪೊಲೀಸರೇ ತನಿಖೆ ಮೂಲಕ ಉತ್ತರ ನೀಡಬೇಕಿದೆ.
Kshetra Samachara
06/12/2020 04:37 pm