ಮಂಗಳೂರು: ಐಎಂಎ ವಂಚನೆ ಹಗರಣದಂತೆ ಇದೀಗ ಮತ್ತೊಂದು ಬಹುಕೋಟಿ ಹಗರಣ ಬೆಳಕಿಗೆ ಬಂದಿದೆ. ಮಲೈಕಾ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಹೆಸರಲ್ಲಿ ಭಾರೀ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ 350ಕ್ಕೂ ಹೆಚ್ಚು ಕೋಟಿ ವಂಚನೆ ಆಗಿರುವ ಶಂಕೆಯಿದ್ದು ಮಂಗಳೂರಿನ ಆರ್ಥಿಕ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ. ಗೃಹಪಯೋಗಿ ವಸ್ತುಗಳ ಶೋ ರೂಂ ಹೊಂದಿರುವ ಮಲೈಕಾ ಇದೀಗ ಈ ಹಗರಣದ ಕೇಂದ್ರ ಬಿಂದುವಾಗಿದೆ. 20 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಪ್ರಾರಂಭವಾದ ಈ ಸಂಸ್ಥೆ ಬಳಿಕ ಮುಂಬೈ, ಗೋವಾದಲ್ಲೂ ಪ್ರಾರಂಭವಾಗಿತ್ತು. 10 ವರ್ಷಗಳ ಹಿಂದೆ ಮಲೈಕಾ ಹೆಸರಲ್ಲಿ ಆರಂಭವಾದ ಸೊಸೈಟಿ ಇದೀಗ ಜನರಿಗೆ ದೋಖಾ ಮಾಡಿದೆ.
ಮಲೈಕಾ ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಮಾಸಿಕ ಸ್ಕೀಂ ನಲ್ಲಿ ಹಲವರು ಹಣ ಇಟ್ಟಿದ್ದರು. ದಕ್ಷಿಣಕನ್ನಡ ಉಡುಪಿ ಜಿಲ್ಲೆಯ ಸುಮಾರು 800ಕ್ಕೂ ಅಧಿಕ ಜನ ಫಿಕ್ಸ್ ಡೆಫಾಸಿಟ್ ಇಟ್ಟಿದ್ದರು. ಆದ್ರೆ ಇದೀಗ ಇಟ್ಟು ಫಿಕ್ಸ್ ಡೆಫಾಸಿಟ್ ಮೆಚ್ಯುರಿಟಿ ಬಂದಿದ್ದರು ವಾಪಾಸು ಹಣ ನೀಡದೇ 40ಕೋಟಿಗೂ ಅಧಿಕ ಹಣ ಪಂಗನಾಮ ಹಾಕಲಾಗಿದೆ. ಮುಂಬೈ ಸೇರಿದಂತೆ ಒಟ್ಟು ಸುಮಾರು 350ಕ್ಕೂ ಅಧಿಕ ಕೋಟಿ ಹಣ ಫ್ರಾಡ್ ಮಾಡಲಾಗಿದೆ ಎಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ. ಮಂಗಳೂರಿನ ಬೆಂದೂರ್ ವೆಲ್ ನಲ್ಲಿನ ಸೊಸೈಟಿಯ ಪ್ರಧಾನ ಕಚೇರಿಯು ಬಂದ್ ಆಗಿ ತಿಂಗಳುಗಳೇ ಕಳೆದಿದೆ. ಹೀಗಾಗಿ ಹಣ ಡೆಪಾಸಿಟ್ ಇಟ್ಟವರು ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯಲ್ಲಿ ಸಂಸ್ಥೆಯ ಸ್ಥಾಪಕ ಮಂಗಳೂರು ಮೂಲದ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ದ ದೂರು ನೀಡಿದ್ದಾರೆ. ಸದ್ಯ ಪ್ರಕರಣದ ಕಿಂಗ್ ಪಿನ್‌ಗಳಾದ ಗಿಲ್ಬರ್ಟ್ ಬ್ಯಾಪಿಸ್ಟ್ ಮತ್ತು ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ನಾಪತ್ತೆಯಾಗಿದ್ದು ಎನ್.ಸಿ.ಇ.ಪಿ.ಎಸ್ ಠಾಣೆ ಪೊಲೀಸರು ಮಂಗಳೂರು ಬ್ರ್ಯಾಂಚ್ ಮ್ಯಾನೇಜರ್ ರೀನಾ ಜೋಶ್ ಬಂಧಿಸಿದ್ದಾರೆ. ಸ್ಥಳ ಮಹಜರು ನಡೆಸಿ ಕಚೇರಿಯಲ್ಲಿದ್ದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
Kshetra Samachara
22/11/2020 05:50 pm