ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು ಜುಮ್ಮಾ ಮಸೀದಿಯಲ್ಲಿ ಮಸೀದಿಯ ಆಡಳಿತ ಮಂಡಳಿಯ ಸೆಕ್ರೆಟರಿ ಹುದ್ದೆ ವಿಚಾರವಾಗಿ ಚೂರಿ ಇರಿತ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಸ್ಥಳೀಯ ನಿವಾಸಿ ಮಕ್ಬುಲ್ ಹುಸೇನ್ ಎಂದು ಗುರುತಿಸಲಾಗಿದೆ. ಆರೋಪಿ ಶುಕ್ರವಾರ ಮಸೀದಿಯಲ್ಲಿ ನಮಾಜು ಮುಗಿದ ಬಳಿಕ ಪೂರ್ವಯೋಜನೆ ಮಾಡಿಕೊಂಡು ಬಂದು ಮಸೀದಿ ಆಡಳಿತ ಮಂಡಳಿಯ ಸೆಕ್ರೆಟರಿ ಹುದ್ದೆಯ ವಿಷಯದಲ್ಲಿ ತಗಾದೆ ತೆಗೆದಾಗ ಗಲಾಟೆ ತಪ್ಪಿಸಲು ನಡುವಿನಲ್ಲಿ ಬಂದ ಸ್ಥಳೀಯ ನಿವಾಸಿಗಳಾದ ಅಣ್ಣ-ತಮ್ಮಂದಿರಾದ ಮೊಹಮ್ಮದ್ ಖಲೀಲ್ ಅಸಾದಿ (42), ಮುನಾವರ್ ರಹಿಮಾನ್ ಅಸಾದಿ (48) ಎಂಬವರಿಗೆ ಏಕಾಏಕಿ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಇರಿತದಿಂದ ಗಂಭೀರ ಗಾಯಗೊಂಡ ಅವರಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಕ್ಬುಲ್ ಈ ಹಿಂದೆ ಮಸೀದಿಯಲ್ಲಿ ಸೆಕ್ರೆಟರಿ ಹುದ್ದೆಯಲ್ಲಿದ್ದು, ನಾಟಕವಾಡಿ ರಾಜೀನಾಮೆ ನೀಡಿದ್ದ ಎನ್ನಲಾಗಿದೆ. ಬಳಿಕ ಪುನಃ ಸೆಕ್ರೆಟರಿ ಹುದ್ದೆಯನ್ನು ಪಡೆಯುವುದಕ್ಕೋಸ್ಕರ ನಾಟಕ ಮಾಡಿಕೊಂಡು ಪ್ರತಿ ಶುಕ್ರವಾರ ಮಸೀದಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆಯುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆರೋಪಿ ಮಕ್ಬುಲ್ ಶುಕ್ರವಾರ ಕೊಲೆ ಮಾಡಲು ಸಂಚು ರೂಪಿಸಿ ಚೂರಿ ಸಮೇತ ಮಸೀದಿಗೆ ಬಂದಿದ್ದು ಏಕಾಏಕಿ ನಡೆದ ಕೊಲೆ ಯತ್ನ ಪ್ರಕರಣದಿಂದ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಧಾವಿಸಿ, ಮಸೀದಿಗೆ ಸೂಕ್ತ ಭದ್ರತೆ ಒದಗಿಸಿದ್ದು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/10/2020 09:52 am