ಕಾರ್ಕಳ: ಕೋವಿಡ್ ಸಂಕಷ್ಟದ ಸಂದರ್ಭ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕರ್ನಾಟಕ ಕಟ್ಟಡ ಕಾರ್ಮಿಕ ಇಲಾಖೆಯು ಕಾರ್ಕಳಕ್ಕೆ 44,95,000 ರೂ. ಮೌಲ್ಯದ 5000 ಆಹಾರ ಕಿಟ್ ಬಿಡುಗಡೆಗೊಳಿಸಿದ್ದು, ಈ ಆಹಾರ ಕಿಟ್ ಯಾರೊಬ್ಬರಿಗೂ ವಿತರಿಸದೆ ಬೋಗಸ್ ಪಟ್ಟಿ ತಯಾರಿಸಿ ಭ್ರಷ್ಟಚಾರ ನಡೆಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಮತ್ತು ತಾಲೂಕು ಕಾರ್ಮಿಕ ಅಧಿಕಾರಿಯವರ ವಿರುದ್ಧ ರಾಜ್ಯ ಲೋಕಾಯುಕ್ತರಿಗೆ ಅವರ ಕಚೇರಿಯಲ್ಲಿ ಭೇಟಿ ಮಾಡಿ ದೂರು ಸಲ್ಲಿಸಲಾಗಿದೆ ಎಂದು ಪುರಸಭೆ ಸದಸ್ಯ ಶುಭದ ರಾವ್ ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆ ಬಿಡುಗಡೆಗೊಳಿಸಿದ ಅನುದಾನದಲ್ಲಿ ಕಾರ್ಕಳ ಶಾಸಕರು ವಿತರಿಸಿದ್ದಾರೆ ಎನ್ನಲಾದ ಸರಕಾರಕ್ಕೆ ಸಲ್ಲಿಸಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಸತ್ತವರು ಮತ್ತು ಆಹಾರ ಕಿಟ್ ಪಡೆಯದೇ ಇದ್ದವರ ಹೆಸರುಗಳೇ ಇದ್ದು, ಇದೊಂದು ಉದ್ದೇಶಪೂರ್ವಕವಾಗಿ ತಯಾರಿಸಿದ ಬೋಗಸ್ ಪಟ್ಟಿಯಾಗಿದೆ. ಈ ಪಟ್ಟಿಯಲ್ಲಿರುವ ಯಾರೊಬ್ಬರೂ ಕಾರ್ಮಿಕ ಇಲಾಖೆಯ ಆಹಾರ ಕಿಟ್ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಸುಳ್ಳು ದಾಖಲೆ ಸೃಷ್ಟಿಸಿ ಸರಕಾರದ ಹಣ ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾರ್ಮಿಕ ಇಲಾಖೆಯವರು ಆಹಾರ ಕಿಟ್ ವಿತರಣೆಯ ಯಾವುದೇ ಕಾರ್ಯಕ್ರಮ ಆಯೋಜಿಸದೆ ಇದ್ದರೂ ಫಲಾನುಭವಿಗಳ ಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿರುವುದು ಮತ್ತು ಆಹಾರ ಕಿಟ್ ವಿತರಣೆಯ ಜವಾಬ್ದಾರಿ ಹೊಂದಿರುವ ಏಜೆನ್ಸಿಯವರ ಬ್ಯಾಂಕ್ ಖಾತೆಯಿಂದ ಬೃಹತ್ ಮೊತ್ತದ ಹಣ ಶಾಸಕರ ಆಪ್ತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವುದು ಭ್ರಷ್ಟಚಾರ ನಡೆದಿರುವ ಬಗ್ಗೆ ಸಂದೇಹಗಳಿಗೆ ಪುಷ್ಟಿ ನೀಡುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
15/10/2020 06:25 pm