ಹತ್ಯೆ ಪ್ರಕರಣದಲ್ಲಿ ಯಾವುದೇ ಸಂಬಂಧಪಡದ ವ್ಯಕ್ತಿಗಳನ್ನು, ಅಮಾಯಕರನ್ನು ಠಾಣೆಗೆ ಕರೆತಂದು ತೊಂದರೆ ಕೊಡುವ ಕಾರ್ಯ ಆಗುತ್ತಿಲ್ಲ. ತನಿಖೆ ಆಧಾರಿತವಾಗಿ ಯಾರಲ್ಲಿ ಮಾಹಿತಿ ಲಭ್ಯವಾಗುತ್ತದೋ ಅಂಥವರನ್ನು ಠಾಣೆಗೆ ಕರೆಸಲಾಗುತ್ತದೆ. ಖಂಡಿತವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನವಿದ್ದವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ದ.ಕ. ಜಿಲ್ಲಾಡಳಿತದ ಶಾಂತಿಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಇಲ್ಲದಿದ್ದಲ್ಲಿ ಅವರನ್ನು ಬಿಟ್ಟು ಕಳುಹಿಸಲಾಗುತ್ತದೆ. ಆದ್ದರಿಂದ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳು ಸಿಗುವವರೆಗೆ ಅನುಮಾನವಿದ್ದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತದೆ. ಅದನ್ನು ಯಾರೂ ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದರು.
ಶಾಂತಿಸಭೆಯಲ್ಲಿ ವಿವಿಧ ಪಕ್ಷಗಳು, ಸಂಘಟನೆಗಳು, ಧಾರ್ಮಿಕ, ಸಮುದಾಯಗಳ ಮುಖಂಡರು ಭಾಗವಹಿಸಿ ದ.ಕ. ಜಿಲ್ಲೆಯಲ್ಲಿ ಶಾಂತಿ ಮೂಡಿಸುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಿದ್ದಾರೆ. ಇದನ್ನು ಯಾವ ರೀತಿಯಲ್ಲಿ ಅಳವಡಿಸಬೇಕು ಎಂಬ ವಿಚಾರದಲ್ಲಿ ಹಿರಿಯ ಅಧಿಕಾರಿಗಳು ನಮಗೆ ಸೂಚನೆ ನೀಡಲಿದ್ದಾರೆ. ಶಾಂತಿ ಸಭೆ ಮೂಲಕ ಜನರಲ್ಲಿನ ಆತಂಕದ ವಾತಾವರಣ ಹೋಗಲಾಡಿಸಿ, ಶಾಂತಿ ಕಾಪಾಡುವ ಪ್ರಯತ್ನದೊಂದಿಗೆ ಸಹಜ ಸ್ಥಿತಿಗೆ ತರಲಾಗುತ್ತಿದೆ ಎಂದು ಹೇಳಿದರು.
ಮುಸ್ಲಿಂ ಸಂಘಟನೆಯ ಮುಖಂಡರು ಶಾಂತಿಸಭೆಯನ್ನು ಬಹಿಷ್ಕಾರ ಮಾಡಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೇನಿಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಸಂಬಂಧಿತ ವ್ಯಕ್ತಿಗಳಿಗೆ ನಾವು ಶಾಂತಿಸಭೆಗೆ ಆಹ್ವಾನ ನೀಡಿದ್ದೇವೆ. ಆದರೆ, ಕೆಲವರು ಅವರದ್ದೇ ಕಮಿಟಿಯ ಮೀಟಿಂಗ್ ಇದೇ ವೇಳೆ ಇದ್ದದ್ದರಿಂದ ಬರಲಾಗುತ್ತಿಲ್ಲ ಎಂದು ಹೇಳಿ ಗೈರಾಗಿದ್ದಾರೆ.
ಇನ್ನು ಕೆಲವರು ಕೆಲವೊಂದು ಬೇಡಿಕೆಗಳನ್ನು ಮುಂದಿರಿಸಿ ಬರಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆ ಬೇಡಿಕೆಗಳು ಯಾವುದೆಂದು ಸಭೆಯಲ್ಲಿದ್ದವರು ತಿಳಿಸಿದ್ದಾರೆ. ಆ ಎಲ್ಲಾ ಬೇಡಿಕೆಗಳನ್ನು ಜಿಲ್ಲಾಧಿಕಾರಿಯವರು ಕೂಲಂಕಷವಾಗಿ ಪರಿಶೀಲಿಸುತ್ತಾರೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
PublicNext
30/07/2022 04:57 pm