ಕುಂದಾಪುರ: ಕೆಲದಿನಗಳಿಂದ ಕಾಲೇಜುಗಳಲ್ಲಿ ಹಿಜಾಬ್ ವಿವಾದ ನಡೆಯುತ್ತಿದೆ. ಹೀಗಾಗಿ ಮಕ್ಕಳ ಪ್ರತಿಭಟನೆ, ತರಗತಿ ಬಹಿಷ್ಕಾರ ಸುದ್ದಿಗಳೇ ಎಲ್ಲೆಡೆಯಿಂದ ಕೇಳಿ ಬರುತ್ತಿದ್ದವು. ಆದರೆ, ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಪೋಲಿ ಮೆಸೇಜ್ ವಿರುದ್ಧ ಇವತ್ತು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಪ್ರತಿಭಟಿಸಿದರು!
ಕುಂದಾಪುರ ಸಂಗಮ್ ಸರ್ಕಲ್ ಬಳಿಯ ಬಿ.ಬಿ.ಹೆಗ್ಡೆ ಕಾಲೇಜಿನ ಪಿಆರ್ ಒ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ರವಾಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾಮುಕ ಪಿಆರ್ ಒ ವಿದ್ಯಾರ್ಥಿನಿಯರಿಗೆ ರಾತ್ರಿ ಹೊತ್ತು ಅಶ್ಲೀಲ ಸಂದೇಶ ಕಳಿಸುತ್ತಿರುವ ಬಗ್ಗೆ ಇಲ್ಲಿನ ವಿದ್ಯಾರ್ಥಿಗಳು ಈ ಹಿಂದೆಯೇ ಪ್ರಾಂಶುಪಾಲರಿಗೆ ದೂರು ನೀಡಿದ್ದರು.
ಆದರೆ, ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದು ತರಗತಿ ಬಹಿಷ್ಕರಿಸಿ ಧರಣಿ ಕುಳಿತಿದ್ದು, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ವಜಾಗೊಳಿಸಲು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಕಾಲೇಜು ಪ್ರಾಂಶುಪಾಲ ಉಮೇಶ್, ಶಿಸ್ತುಕ್ರಮ ಜರುಗಿಸುವ ಭರವಸೆ ನೀಡಿದರು. ಒಂದು ಹಂತದಲ್ಲಿ ವಿದ್ಯಾರ್ಥಿಗಳು ಪಿಆರ್ ಒ ರನ್ನು ಸ್ಥಳಕ್ಕೆ ಕರೆಸಬೇಕೆಂದು ಪಟ್ಟು ಹಿಡಿದರು. ಕೊನೆಗೆ ಕ್ರಮ ಜರುಗಿಸುವ ಭರವಸೆ ನೀಡಿ ವಿದ್ಯಾರ್ಥಿಗಳ ಮನವೊಲಿಸಿದ ಬಳಿಕ ವಿದ್ಯಾರ್ಥಿಗಳು ಧರಣಿ ಕೈಬಿಟ್ಟರು. ಅಂದಹಾಗೆ ಇದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರು ನಡೆಸುತ್ತಿರುವ ಕಾಲೇಜು ಎಂಬುದು ಇಲ್ಲಿ ಗಮನಾರ್ಹ.
PublicNext
24/02/2022 09:17 pm